ಉಡುಪಿ: ನಂದಕುಮಾರ್ ಅಸೋಸಿಯೇಟ್ಸ್‌ನ ವರಿಷ್ಠರಾದ ಎಂ. ಗಂಗಾಧರ ರಾವ್ ಅವರು ತಮ್ಮ ವೃತ್ತಿ ಬದುಕಿನ 40ನೇ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ನವೆಂಬರ್ 4ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ನಾರಾಯಣ ಎಂ. ಹೆಗಡೆ ರಚಿಸಿದ ‘ಕರ್ಮಯೋಗಿ-ಕಲಾಪ್ರೇಮಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಅನುಗ್ರಹ ಸಂದೇಶ ನೀಡಿದ ಶ್ರೀಗಳು, ನಂದಕುಮಾರ್ ಅವರು ಪರೋಪಕಾರ, ಕೃತಜ್ಞತೆ, ಸರಳತೆ ಹಾಗೂ ಗುಣಮಟ್ಟದ ಕಟ್ಟಡ ನಿರ್ಮಾಣದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಕೇವಲ ಕಟ್ಟಡಗಳನ್ನಷ್ಟೇ ನಿರ್ಮಿಸದೆ, ತಮ್ಮ ಸ್ನೇಹಪೂರ್ಣ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಸೌಹಾರ್ದ ಸಂಬಂಧಗಳ ಸೇತುವೆಯನ್ನೂ ಕಟ್ಟಿದ್ದಾರೆ. ದುಡಿಮೆಯ ದೊಡ್ಡ ಪಾಲನ್ನು ಸಮಾಜಕ್ಕೆ ಸಮರ್ಪಿಸುವ ಮೂಲಕ ಆದರ್ಶ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಂ. ಗಂಗಾಧರ ರಾವ್ ಅವರ ಅಧ್ಯಕ್ಷತೆಯಲ್ಲಿ ಯಕ್ಷಗಾನ ಕಲಾರಂಗವು ಬಡ ವಿದ್ಯಾರ್ಥಿಗಳಿಗೆ ಹಾಗೂ ಕಲಾವಿದರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಅವರಿಗೆ ಉತ್ತರೋತ್ತರ ಶ್ರೇಯಸ್ಸು ಲಭಿಸಲಿ ಎಂದು ಶ್ರೀಗಳು ಹರಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್, ಕರ್ಣಾಟಕ ಬ್ಯಾಂಕ್ ಜಿಎಂ ಬಿ. ಗೋಪಾಲಕೃಷ್ಣ ಸಾಮಗ, ಉಜ್ವಲ್ ಡೆವೆಲಪರ್ಸ್‌ನ ಪಿ. ಪುರುಷೋತ್ತಮ ಶೆಟ್ಟಿ, ಸಹಕಾರಿ ಧುರೀಣ ಇಂದ್ರಾಳಿ ಜಯಕರ್ ಶೆಟ್ಟಿ, ಕ್ರೆಡೈ ಅಧ್ಯಕ್ಷ ಕೆ. ಸುಧೀರ್ ಶೆಟ್ಟಿ, ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಭಗವಾನ್‌ದಾಸ, ಇಂಜಿನಿಯರ್ ಎಂ. ಗೋಪಾಲ ಭಟ್, ಆರ್ಕಿಟೆಕ್ಟ್ ಯೋಗೀಶ್ಚಂದ್ರಾಧರ್, ಗಾಂಧಿ ಆಸ್ಪತ್ರೆಯ ಡಾ. ಹರಿಶ್ಚಂದ್ರ, ಸೀತಾರಾಮ ತೋಳ್ಪಡಿತ್ತಾಯ ಹಾಗೂ ಎಂ. ಗೋಪಿಕೃಷ್ಣ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಗಂಗಾಧರ ರಾವ್ ಅವರ ತಾಯಿ ಕುಸುಮಾ ಎಂ. ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗಂಗಾಧರ ರಾವ್ ಅವರು ತಮ್ಮ ವಿದ್ಯಾಗುರುಗಳು, ಸಹಕರಿಸಿದ ಗಣ್ಯರು, ಗ್ರಾಹಕರು, ವೃತ್ತಿಸ್ನೇಹಿತರು, ಕಟ್ಟಡ ನಿರ್ಮಾಣದ ವಿವಿಧ ವಿಭಾಗಗಳಲ್ಲಿ ದುಡಿದ ಕಾರ್ಮಿಕ ಮುಖ್ಯಸ್ಥರು ಹಾಗೂ ಸಂಸ್ಥೆಯ ಹಾಲಿ ಮತ್ತು ನಿವೃತ್ತ ಸಿಬ್ಬಂದಿ ಸೇರಿದಂತೆ ಸುಮಾರು 120 ಮಂದಿಯನ್ನು ಶಾಲು, ಅಭಿನಂದನಾ ಪತ್ರ, ಸ್ಮರಣಿಕೆ ಹಾಗೂ ಶ್ರೀಗಳ ಅನುಗ್ರಹ ಮಂತ್ರಾಕ್ಷತೆಯೊಂದಿಗೆ ಗೌರವಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಗಂಗಾಧರ ರಾವ್ ಅವರ ವಿಶಿಷ್ಟ ವ್ಯಕ್ತಿತ್ವ, ಸಮಾಜಪ್ರೀತಿ, ಕಟ್ಟಡ ನಿರ್ಮಾಣ ಕ್ಷೇತ್ರದ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯನ್ನು ತಮ್ಮ ಅನುಭವಗಳ ಮೂಲಕ ಹಂಚಿಕೊಂಡರು. ಎಂ. ಗಂಗಾಧರ ರಾವ್ ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಸರಸ್ವತಿ ಜಿ. ರಾವ್ ವಂದಿಸಿದರು. ಕುಮಾರಿ ಪಾವನಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುರಲಿ ಕಡೆಕಾರ್ ನಿರೂಪಿಸಿದರು.


