ಉಡುಪಿ : ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ 2025-26ನೇ ಸಾಲಿನಲ್ಲಿ ದಾಖಲೆಯ ಆದಾಯ ಗಳಿಸಿ ಹೊಸ ಇತಿಹಾಸ ನಿರ್ಮಿಸಿದೆ. ದೇವಳದ ವಾರ್ಷಿಕ ಆದಾಯ ಈ ಬಾರಿ ಭರ್ಜರಿ 85 ಕೋಟಿ ರೂ. ತಲುಪಿದ್ದು, ಭಕ್ತರ ಸಂಖ್ಯೆ ಹಾಗೂ ಕಾಣಿಕೆಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಕಳೆದ ಕೆಲವು ವರ್ಷಗಳಿಂದ ದೇವಳದ ಆದಾಯದಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದ್ದು, 2023-24ನೇ ಸಾಲಿನಲ್ಲಿ ದೇವಸ್ಥಾನದ ಆದಾಯ 68 ಕೋಟಿ ರೂ. ಇದ್ದರೆ, 2024-25ರಲ್ಲಿ ಅದು 71 ಕೋಟಿ ರೂ.ಗೆ ಏರಿಕೆಯಾಗಿತ್ತು. ಇದೀಗ 2025-26ರಲ್ಲಿ ಏಕಾಏಕಿ 85 ಕೋಟಿ ರೂ. ತಲುಪಿರುವುದು ದೇವಳದ ಇತಿಹಾಸದಲ್ಲೇ ದಾಖಲೆಯ ಆದಾಯವೆಂದು ತಿಳಿದುಬಂದಿದೆ.

ಭಕ್ತರ ಹೆಚ್ಚುತ್ತಿರುವ ನಂಬಿಕೆ, ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಯಾತ್ರಾರ್ಥಿಗಳ ಸಂಖ್ಯೆ, ವಿಶೇಷ ಪೂಜೆಗಳು ಹಾಗೂ ಉತ್ಸವಗಳ ಸಂದರ್ಭಗಳಲ್ಲಿ ಕಂಡುಬಂದ ಭಾರೀ ಜನಸಂದಣಿ ದೇವಳದ ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗಿದೆ. ವಿಶೇಷವಾಗಿ ನವರಾತ್ರಿ ಉತ್ಸವ, ವಾರಾಂತ್ಯಗಳು ಹಾಗೂ ರಜಾ ದಿನಗಳಲ್ಲಿ ದೇವಸ್ಥಾನದಲ್ಲಿ ಭಕ್ತರ ಪ್ರವಾಹವೇ ಹರಿದು ಬರುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, 2025-26ನೇ ಸಾಲಿನಲ್ಲಿ ದೇವಸ್ಥಾನಕ್ಕೆ ದಾಖಲೆಯ 85 ಕೋಟಿ ರೂ. ಆದಾಯ ಬಂದಿದೆ. ಇದು ಕಳೆದ ಸಾಲಿಗಿಂತ ಸುಮಾರು 13 ಕೋಟಿ ರೂ. ಅಧಿಕ. ಭಕ್ತರ ವಿಶ್ವಾಸ ಮತ್ತು ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಸಹ್ಯಾದ್ರಿ ಪರ್ವತಗಳ ಮಡಿಲಿನಲ್ಲಿ ನೆಲೆಸಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಕ್ಷೇತ್ರವು ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ. ದೇವಿಯ ದರ್ಶನಕ್ಕಾಗಿ ವರ್ಷಪೂರ್ತಿ ಹರಿದುಬರುವ ಭಕ್ತ ಸಾಗರವೇ ಇದೀಗ ದೇವಳದ ಆದಾಯದಲ್ಲೂ ಹೊಸ ಮೈಲಿಗಲ್ಲು ನಿರ್ಮಿಸಿದೆ.



