ಕುಂದಾಪುರ: ಕುಂದಾಪುರ ಪಟ್ಟಣದ ಹೋಲಿ ರೋಜರಿ ಚರ್ಚ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.

ಮೃತರನ್ನು ಬಾರ್ಕೂರಿನ ಐವನ್ ರಿಚರ್ಡ್ ಮಸ್ಕರೇನಸ್ (45) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಸುಮಾರು 3.30ರ ವೇಳೆಗೆ ಹೋಲಿ ರೋಜರಿ ಚರ್ಚ್ ಸಮೀಪ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಹತ್ಯೆಗೈದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಹತ್ಯೆ ನಡೆಸಿದ ಬಳಿಕ ಆರೋಪಿಯು ಕಾರಿನಲ್ಲಿ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕುಂದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹ ಕಾರ್ಯ ಆರಂಭಿಸಿತು.

ಪ್ರಾಥಮಿಕ ತನಿಖೆಯಲ್ಲಿ ಹಣಕಾಸು ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಘಟನೆಯಿಂದ ಕುಂದಾಪುರ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


