Saturday, November 7, 2026

spot_img

ರಾಷ್ಟ್ರೀಯ ಹೆದ್ದಾರಿ-66ರ ಅಪಘಾತ ತಡೆಗೆ ತುರ್ತು ಕ್ರಮ: ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸಭೆ

ಉಡುಪಿ : ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಹೆಜಮಾಡಿಯಿಂದ ಬೈಂದೂರುವರೆಗಿನ ನಿರಂತರ ಅಪಘಾತಗಳು, ಮೂಲಸೌಕರ್ಯಗಳ ಕೊರತೆ ಹಾಗೂ ಸಾರ್ವಜನಿಕರ ಬೇಡಿಕೆಗಳ ಕುರಿತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ನಾಗಸಂದ್ರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಕಚೇರಿಯಲ್ಲಿ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ 10 ತಿಂಗಳಲ್ಲಿ 94 ಮಂದಿ ಅಪಘಾತಗಳಿಗೆ ಬಲಿಯಾಗಿದ್ದಾರೆ. 14 ಸ್ಥಳಗಳನ್ನು ಅಪಘಾತದ ಬ್ಲ್ಯಾಕ್‌ಸ್ಪಾಟ್‌ಗಳೆಂದು ಗುರುತಿಸಿದ್ದರೂ, ಹೆದ್ದಾರಿ ನಿರ್ವಹಣಾ ಇಲಾಖೆಯ ನಿರ್ಲಕ್ಷ್ಯದಿಂದ ಸಮಸ್ಯೆ ಗಂಭೀರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ-66ರ ಸಮಗ್ರ ಡಿಪಿಆರ್‌ ಮಾಹಿತಿಯನ್ನು ಜನಪ್ರತಿನಿಧಿಗಳ ಗಮನಕ್ಕೆ ಮೊದಲೇ ತರಬೇಕು. ಇಲ್ಲದಿದ್ದರೆ ಮುಂದಾಗುವ ಸಮಸ್ಯೆಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಹೆಜಮಾಡಿಯಿಂದ ಕುಂದಾಪುರದವರೆಗಿನ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಹಂತ ಹಂತವಾಗಿ ಅನುಮೋದನೆ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿಲಾಸ್ ಬ್ರಹ್ಮಣ್ಕರ್ ತಿಳಿಸಿದರು. ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ಬ್ರಹ್ಮಾವರದ ಕಲ್ಯಾಣಪುರ, ಅಂಬಾಗಿಲು ಹಾಗೂ ಎರ್ಮಾಳು ಭಾಗಗಳಲ್ಲಿ ಸರ್ವಿಸ್ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೋಟ ವಿವೇಕ ಹೈಸ್ಕೂಲ್, ಸಾಸ್ತಾನ ಬಸ್ ನಿಲ್ದಾಣ ಹಾಗೂ ಟೋಲ್ ಪ್ಲಾಜಾ ಸಮೀಪ ಸರ್ವಿಸ್ ರಸ್ತೆ ಕಾಮಗಾರಿಗಳು ಶೀಘ್ರ ಆರಂಭವಾಗಲಿವೆ ಎಂದು ವಿವರಿಸಿದರು. ಸಾಲಿಗ್ರಾಮದ ಗುರುನರಸಿಂಹ ಹಾಗೂ ಆಂಜನೇಯ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರು ಹೆದ್ದಾರಿ ದಾಟುವ ಸಂದರ್ಭದಲ್ಲಿ ಸಂಭವಿಸುವ ಅಪಘಾತಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಭಕ್ತಾದಿಗಳ ಬೇಡಿಕೆಯಂತೆ ಅಂಡರ್‌ಪಾಸ್ ನಿರ್ಮಿಸುವ ಕುರಿತು ತಾಂತ್ರಿಕ ಕಾರಣಗಳು ಹಾಗೂ ನೀರು ಹರಿಯುವ ಸಮಸ್ಯೆಯನ್ನು ಪರಿಶೀಲಿಸಿ, ಸಂಬಂಧಿಸಿದ ಸಂಸ್ಥೆಗೆ ವರದಿ ಸಲ್ಲಿಸುವಂತೆ ಪ್ರಾದೇಶಿಕ ಕಚೇರಿ ಸೂಚಿಸಿತು.

ಕಾಪು ವಿಧಾನಸಭಾ ಕ್ಷೇತ್ರದ ತೆಂಕ-ಎರ್ಮಾಳು ಉಚ್ಚಿಲದಲ್ಲಿ ನಿರ್ಮಾಣವಾಗುತ್ತಿರುವ ಪಾದಚಾರಿ ಮೇಲ್ಸೇತುವೆ ಸಾರ್ವಜನಿಕರಿಗೆ ಸಮರ್ಪಕವಾಗಿ ಉಪಯೋಗವಾಗುತ್ತಿಲ್ಲ ಎಂಬ ವಿಚಾರವೂ ಪ್ರಸ್ತಾಪವಾಯಿತು. ದೇವಾಲಯ ಹಾಗೂ ಪಾದಚಾರಿಗಳಿಗೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸ್ಥಳೀಯ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾಮಗಾರಿ ಸ್ಥಗಿತಗೊಳಿಸುವಂತೆ ಲಿಖಿತ ಮನವಿ ಸಲ್ಲಿಸಿದ್ದರೂ ಕಾಮಗಾರಿ ಮುಂದುವರಿಯುತ್ತಿರುವ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಯಿತು. ಗ್ರಾಮಸಭೆಯಲ್ಲಿಯೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿರುವುದನ್ನು ಸಂಸದರು ಉಲ್ಲೇಖಿಸಿದರು. ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಪ್ರಾದೇಶಿಕ ಅಧಿಕಾರಿ ಬ್ರಹ್ಮಣ್ಕರ್ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.

ಅಂಬಲಪಾಡಿ ಮೇಲ್ಸೇತುವೆ, ಕೆಳಭಾಗದ ಸರ್ವಿಸ್ ರಸ್ತೆ ಹಾಗೂ ಹೊಂಡಗಳಿಂದ ತುಂಬಿರುವ ರಸ್ತೆಯನ್ನು ತಕ್ಷಣ ಸರಿಪಡಿಸುವಂತೆ ಯೋಜನಾ ನಿರ್ದೇಶಕ ಜಾವೇದ್ ಅವರಿಗೆ ಸೂಚಿಸಲಾಯಿತು. ಸಂತೇಕಟ್ಟೆಯಲ್ಲಿ 5.5 ಮೀಟರ್ ಅಗಲದ ಸರ್ವಿಸ್ ರಸ್ತೆಯನ್ನು 7.5 ಮೀಟರ್‌ಗೆ ವಿಸ್ತರಿಸಿ ಸ್ಥಳೀಯ ವಾಹನಗಳ ಸಂಚಾರ ಸುಗಮಗೊಳಿಸುವಂತೆ ಸಂಸದರು ಪ್ರಸ್ತಾಪಿಸಿದರು. ಕೋಟ ಜಂಕ್ಷನ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತದ ಕುರಿತು ತಕ್ಷಣ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳುವ ನಿರ್ಧಾರವೂ ಸಭೆಯಲ್ಲಿ ನಡೆಯಿತು. ಬಲಾಯಿಪಾದೆ, ಕಿನ್ನಿಮೂಲ್ಕಿ, ಕಟಪಾಡಿ ಹಾಗೂ ಗುಂಡ್ಮಿ-ಬ್ರಹ್ಮಾವರ ಗಾಂಧಿನಗರ ಭಾಗಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸಂಸದರು ಅಧಿಕಾರಿಗಳಿಗೆ ತಿಳಿಸಿದರು. ಕಟಪಾಡಿ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಳಿಸಲು 18 ಸೆಪ್ಟೆಂಬರ್ 2027ರ ಗಡುವು ನಿಗದಿಯಾಗಿದ್ದು, ಅದಕ್ಕಿಂತ ಮುಂಚಿತವಾಗಿ ಕಾಮಗಾರಿ ಮುಗಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸಂಸದರಿಗೆ ತಿಳಿಸಿದರು. ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಪ್ಲಾಜಾಗಳಲ್ಲಿ 20 ಕಿ.ಮೀ. ವ್ಯಾಪ್ತಿಯೊಳಗಿನ ಸ್ಥಳೀಯ ವಾಹನ ಮಾಲೀಕರಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡುವ ಕುರಿತು ಸಂಸದರು ಸೂಚನೆ ನೀಡಿದರು. ಸಭೆಯಲ್ಲಿದ್ದ ಟೋಲ್ ಪ್ಲಾಜಾ ಮುಖ್ಯಸ್ಥ ತಿಮ್ಮಯ್ಯ ಅವರಿಗೆ ತಕ್ಷಣ ಕ್ರಮ ವಹಿಸುವಂತೆ ಪ್ರಾದೇಶಿಕ ಅಧಿಕಾರಿ ಬ್ರಹ್ಮಣ್ಕರ್ ನಿರ್ದೇಶನ ನೀಡಿದರು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ಯೋಜನಾ ನಿರ್ದೇಶಕ ಜಾವೇದ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕ ನಿತಿನ್ ಜೋಸೆಫ್, ಡಿಜಿಎಂ ಡಾ. ವಾಣಿಶ್ರೀ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles