Friday, November 6, 2026

spot_img

ಬಸ್ ನಿಲ್ಲಿಸದ ವಿಚಾರಕ್ಕೆ ಗಲಾಟೆ: ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಹಲ್ಲೆ :ಎರಡು ಪ್ರತ್ಯೇಕ ಪ್ರಕರಣ ದಾಖಲು

ಉಡುಪಿ: ಶಕ್ತಿ ಯೋಜನೆಯಡಿ ಪ್ರಯಾಣಿಸುತ್ತಿದ್ದ ಮಹಿಳೆಯರು ಉಪ್ಪುಂದದಲ್ಲಿ ಬಸ್ ನಿಲ್ಲಿಸುವಂತೆ ಕೇಳಿದ ವಿಚಾರವಾಗಿ ಆರಂಭವಾದ ವಾಗ್ವಾದ ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಲ್ಲೆ ಹಾಗೂ ಪ್ರತ್ಯೇಕ ದೂರುಗಳಿಗೆ ಕಾರಣವಾಗಿದೆ. ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ, ಚಾಲಕನ ಮೇಲೂ ಹಲ್ಲೆಗೆ ಯತ್ನಿಸಿದ ಆರೋಪ ಒಂದೆಡೆಯಾದರೆ, ಇದೇ ಘಟನೆಯಲ್ಲಿ ನಿರ್ವಾಹಕರು ತಮ್ಮ ಹಾಗೂ ತಾಯಿಗೆ ತೊಂದರೆ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.  ನ. 5ರಂದು ಕುಮಟಾದಿಂದ ಕುಂದಾಪುರಕ್ಕೆ ಸಂಚರಿಸುತ್ತಿದ್ದ ಕೆಎ-19-ಎಫ್-3198 ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಿರ್ವಾಹಕ ಮಂಜುನಾಥ ಮಡಿವಾಳ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿರೂರಿನಲ್ಲಿ ಬಸ್ ಹತ್ತಿದ್ದ ಇಬ್ಬರು ಮಹಿಳೆಯರು ಶಕ್ತಿ ಯೋಜನೆಯಡಿ ಕುಂದಾಪುರಕ್ಕೆ ಟಿಕೆಟ್ ಪಡೆದುಕೊಂಡಿದ್ದರು. ಉಪ್ಪುಂದ ಸಮೀಪ ಬಸ್ ನಿಲ್ಲಿಸುವಂತೆ ಮಹಿಳೆಯರು ಕೇಳಿದಾಗ, ಟಿಕೆಟ್ ಪಡೆದ ಸ್ಥಳದಲ್ಲಿಯೇ ಇಳಿಯಬೇಕು ಎಂದು ನಿರ್ವಾಹಕರು ತಿಳಿಸಿದ್ದರು ಎನ್ನಲಾಗಿದೆ.

ಮಧ್ಯಾಹ್ನ ಸುಮಾರು 12.15ಕ್ಕೆ ಬಸ್ ಕುಂದಾಪುರ ನಿಲ್ದಾಣ ತಲುಪಿದ ಬಳಿಕ ಮಹಿಳೆಯರು ಇಳಿದಿದ್ದರು. ನಂತರ ಹೊಸ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದ ವೇಳೆ ಆರೋಪಿಗಳು ಬಸ್ಸಿನೊಳಗೆ ನುಗ್ಗಿ, ಉಪ್ಪುಂದದಲ್ಲಿ ಬಸ್ ನಿಲ್ಲಿಸದ ವಿಚಾರವಾಗಿ ನಿರ್ವಾಹಕ ಮಂಜುನಾಥ ಅವರೊಂದಿಗೆ ಜಗಳವಾಡಿದ್ದಾರೆ. ಈ ಸಂದರ್ಭ ಅವರ ಸಮವಸ್ತ್ರದ ಕಾಲರ್ ಹಿಡಿದು ಅವಾಚ್ಯವಾಗಿ ನಿಂದಿಸಿ ಕೈಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಮುಂದಾದ ಚಾಲಕ ಲಕ್ಷ್ಮಣ ನಾರಾಯಣ ನಾಯ್ಕ್ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದು, ಚಾಲಕರು ಮೊಬೈಲ್‌ನಲ್ಲಿ ಫೋಟೊ ತೆಗೆಯಲು ಮುಂದಾದಾಗ ಮೊಬೈಲ್ ಎಸೆದು ಆರೋಪಿಗಳು ಸ್ಥಳದಿಂದ ತೆರಳಿದ್ದಾರೆ ಎಂದು ಚಾಲಕ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸರ್ಕಾರಿ ಕರ್ತವ್ಯದಲ್ಲಿದ್ದ ನಿರ್ವಾಹಕರಿಗೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪದಡಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಘಟನೆಯ ಕುರಿತು ಶಿರೂರಿನ ಬುಕಾರಿ ಕಾಲೊನಿ ನಿವಾಸಿ ಸನಾ (37) ಅವರು ನಿರ್ವಾಹಕ ಮಂಜುನಾಥ ಅವರ ವಿರುದ್ಧ ದೂರು ನೀಡಿದ್ದಾರೆ. ನ. 5ರಂದು ಬೆಳಗ್ಗೆ ತಾಯಿ ಶಾಹಿನಾ ಅವರೊಂದಿಗೆ ಆಸ್ಪತ್ರೆಗೆ ತೆರಳಲು ಶಿರೂರಿನಿಂದ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದ ಸನಾ, ಇಬ್ಬರಿಗೂ ಟಿಕೆಟ್ ಪಡೆದಿದ್ದರು. ಉಪ್ಪುಂದ ಸಮೀಪ ಬಂದಾಗ ಆಸ್ಪತ್ರೆಯ ಅಗತ್ಯ ದಾಖಲೆಗಳನ್ನು ಮನೆಯಲ್ಲಿ ಬಿಟ್ಟು ಬಂದಿರುವುದು ಗಮನಕ್ಕೆ ಬಂದಿದ್ದು, ಬಸ್ ನಿಲ್ಲಿಸುವಂತೆ ನಿರ್ವಾಹಕರಲ್ಲಿ ಮನವಿ ಮಾಡಿದ್ದರು. ಆದರೆ ಬಸ್ ನಿಲ್ಲಿಸಲು ಸಾಧ್ಯವಿಲ್ಲ ಎಂದು ನಿರ್ವಾಹಕರು ತಿಳಿಸಿದ್ದರು. ಬಳಿಕ ತ್ರಾಸಿಯಲ್ಲಿಯೂ ಇಳಿಯಲು ಅವಕಾಶ ನೀಡದ ಕಾರಣ ಕುಂದಾಪುರ ಬಸ್ ನಿಲ್ದಾಣದಲ್ಲಿ ತಾಯಿ-ಮಗಳು ಇಳಿದಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಧ್ಯಾಹ್ನ ಸುಮಾರು 12.15ರ ವೇಳೆಗೆ ನಿರ್ವಾಹಕರು ತಮ್ಮನ್ನು ಹಾಗೂ ತಾಯಿಯನ್ನು ತಡೆದು ನಿಲ್ಲಿಸಿ ಉಡಾಫೆಯಿಂದ ಮಾತನಾಡಿ ತೊಂದರೆ ನೀಡಿದ್ದಾರೆ ಎಂದು ಸನಾ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ನಿರ್ವಾಹಕರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಬಸ್ ನಿಲ್ಲಿಸುವ ವಿಚಾರವಾಗಿ ಆರಂಭವಾದ ಒಂದೇ ಘಟನೆಯು ನಿರ್ವಾಹಕನ ಮೇಲಿನ ಹಲ್ಲೆ ಆರೋಪ ಮತ್ತು ನಿರ್ವಾಹಕರ ವಿರುದ್ಧದ ಮಹಿಳೆಯ ದೂರಿನೊಂದಿಗೆ ಎರಡು ಪ್ರತ್ಯೇಕ ಪ್ರಕರಣಗಳಾಗಿ ದಾಖಲಾಗಿದ್ದು, ಎರಡೂ ಪ್ರಕರಣಗಳ ಕುರಿತು ಕುಂದಾಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles