ಉಡುಪಿ : ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಶುಕ್ರವಾರ ಆಚರಿಸಲಾಯಿತು. ಬಳಿಕ ಸ್ವಚ್ಛತಾ ಹೀ ಸೇವಾ–2026 ಅಭಿಯಾನದ ಅಂಗವಾಗಿ ಪಾರಂಪಳ್ಳಿ ಗ್ರಾಮದ ಉದ್ಯಾನವನದಲ್ಲಿ ತಾಯಿಯ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. ಇದರ ಭಾಗವಾಗಿ ‘ಉಡುಪಿ ಸಿವಿಕ್ ವಾಚ್’ ಆ್ಯಪ್ನಲ್ಲಿ ಅತಿ ಹೆಚ್ಚು ಬಾರಿ ಕಸ ಎಸೆಯುವ ಸ್ಥಳವೆಂದು ದಾಖಲಾಗಿದ್ದ ಪ್ರದೇಶವನ್ನು ಪಟ್ಟಣ ಪಂಚಾಯತ್ ಗುರುತಿಸಿತು.

ನಿರಂತರವಾಗಿ ತ್ಯಾಜ್ಯ ಎಸೆಯಲಾಗುತ್ತಿದ್ದ ಈ ಸ್ಥಳವನ್ನು ‘ಕಸದ ಕಪ್ಪು ಚುಕ್ಕೆ’ಯಾಗಿ ಗುರುತಿಸಿ, ತ್ಯಾಜ್ಯ ವಸ್ತುಗಳನ್ನೇ ಬಳಸಿಕೊಂಡು ಸ್ಥಳದ ಸೌಂದರ್ಯೀಕರಣ ಮಾಡಲಾಯಿತು. ಬಳಿಕ ಅದೇ ಸ್ಥಳದಲ್ಲಿ ಸಸಿ ನೆಟ್ಟು ಹಸಿರು ವಾತಾವರಣ ನಿರ್ಮಿಸುವ ಮೂಲಕ ಕಸದ ಸ್ಥಳವನ್ನು ಸ್ವಚ್ಛ ಹಾಗೂ ಆಕರ್ಷಕ ತಾಣವಾಗಿ ಪರಿವರ್ತಿಸಲಾಯಿತು. ಹಸಿಕಸದಿಂದ ತಯಾರಾದ ಗೊಬ್ಬರವನ್ನು ಸಸಿಗೆ ಬಳಸಲಾಯಿತು.

ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಜೆ. ಅವರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳು, ಸ್ವಚ್ಛತೆಯ ಮಹತ್ವ ಹಾಗೂ ಸಾರ್ವಜನಿಕರ ಸಹಭಾಗಿತ್ವದ ಕುರಿತು ಮಾಹಿತಿ ನೀಡಿದರು. ಸ್ವಚ್ಛತೆ ಕೇವಲ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿರದೆ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯದೆ, ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಪಟ್ಟಣ ಪಂಚಾಯತ್ನ ಕಿರಿಯ ಆರೋಗ್ಯ ನಿರೀಕ್ಷಕರು, ಸಿಬ್ಬಂದಿ ವರ್ಗ, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಚ್ಛತಾ ಅಭಿಯಾನದ ಅಂಗವಾಗಿ ಕೈಗೊಂಡ ಈ ಕಾರ್ಯ ಸ್ಥಳೀಯರಲ್ಲಿ ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಲು ಸಹಕಾರಿಯಾಯಿತು.


