ಉಡುಪಿ: ಅಂಗವಿಕಲ ಮಗಳನ್ನು ಕತ್ತಿಯಿಂದ ಕುತ್ತಿಗೆಗೆ ಕಡಿದು ಕೊಲೆ ಮಾಡಿದ ಬಳಿಕ ತಾಯಿಯೂ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮದ ಶಾನಾಡಿ ಎಸ್‌ಟಿ ಕಾಲೋನಿಯಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ನೇತ್ರಾವತಿ (38) ಹಾಗೂ ಅವರ ಪುತ್ರಿ ಸುಪ್ರತಿ (14) ಎಂದು ಗುರುತಿಸಲಾಗಿದೆ.

ನೇತ್ರಾವತಿ ಅವರು ಪತಿ ಸುಧಾಕರ ಹಾಗೂ ಮಕ್ಕಳಾದ ಸುಪ್ರತಿ ಮತ್ತು ಸುಕಾಂತ ಅವರೊಂದಿಗೆ ಶಾನಾಡಿಯಲ್ಲಿ ವಾಸವಾಗಿದ್ದರು. ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿತ್ತು. ಸುಪ್ರತಿ ಅಂಗವಿಕಲೆಯಾಗಿದ್ದು, ಸ್ವತಃ ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಅಕ್ಟೋಬರ್ 25ರಂದು ಬೆಳಗ್ಗೆ ಸುಮಾರು 8.15ಕ್ಕೆ ಸುಧಾಕರ ಅವರು ಕೆಲಸಕ್ಕೆ ತೆರಳಿದ್ದರು. ಇದೇ ವೇಳೆ ಪಕ್ಕದ ಮನೆಯಲ್ಲಿದ್ದ ನೇತ್ರಾವತಿ ಅವರ ಅಣ್ಣನ ಮಗಳು ಸಂತೋಷ್ (45) ಮನೆಯ ಸಮೀಪ ಬುಟ್ಟಿ ಮಾಡುವ ಕೆಲಸದಲ್ಲಿ ನಿರತರಾಗಿದ್ದರು ಎನ್ನಲಾಗಿದೆ.

ಬೆಳಗ್ಗೆ ಸುಮಾರು 9 ಗಂಟೆಗೆ ಚಂದ್ರಮತಿ ಎಂಬವರು ಬಂದು, ನೇತ್ರಾವತಿ ಅವರು ಮಲಗಿದ್ದ ಮಗಳ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಬಳಿಕ ಮನೆಯ ಪಕ್ಕಾಸಿಗೆ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಸಂತೋಷ್ ಅವರು ತಕ್ಷಣ ನೇತ್ರಾವತಿ ಅವರ ಮನೆಗೆ ತೆರಳಿ ನೋಡಿದಾಗ, ಹಾಲ್‌ನಲ್ಲಿದ್ದ ಹಾಸಿಗೆಯ ಮೇಲೆ ಸುಪ್ರತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಕುತ್ತಿಗೆಗೆ ಕತ್ತಿಯಿಂದ ಗಾಯವಾಗಿದ್ದು, ಕುತ್ತಿಗೆ ಮತ್ತು ಮುಖದ ಭಾಗದಲ್ಲಿ ರಕ್ತಸ್ರಾವವಾಗಿತ್ತು. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮನೆಯ ಹಾಲ್‌ನ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ನೇತ್ರಾವತಿ ಅವರ ಮೃತದೇಹ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಗಳ ಅಂಗವೈಕಲ್ಯ ಅಥವಾ ಇನ್ಯಾವುದೋ ಕಾರಣದಿಂದ ನೇತ್ರಾವತಿ ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯನ್ನು ದೂರುದಾರರು ವ್ಯಕ್ತಪಡಿಸಿದ್ದಾರೆ. ಆದರೆ ಘಟನೆಯ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಬೆಳಗ್ಗೆ 8.15ರಿಂದ 9 ಗಂಟೆಯ ನಡುವಿನ ಅವಧಿಯಲ್ಲಿ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಇತರ ವಿವರಗಳು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.


