ಉಡುಪಿ : ಬೈಂದೂರು ತಾಲೂಕಿನ ಅರಾಟೆ ಸೇತುವೆ ಸಮೀಪ ರವಿವಾರ ಬೆಳಗ್ಗೆ ಎರಡು ಖಾಸಗಿ ಬಸ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 26 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರವಿವಾರ ಬೆಳಗ್ಗೆ ಸುಮಾರು 7 ಗಂಟೆಗೆ ಬೈಂದೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಕುಂದಾಪುರದಿಂದ ಸಾಗರದ ಕಡೆಗೆ ಸಂಚರಿಸುತ್ತಿದ್ದ ಮತ್ತೊಂದು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿಯ ಪರಿಣಾಮ ಎರಡೂ ಬಸ್ಗಳಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಅಪಘಾತದ ತಕ್ಷಣ ಸ್ಥಳೀಯರು ಹಾಗೂ ಆಪತ್ಬಾಂಧವ ತಂಡದ ಸದಸ್ಯರು ಗಾಯಾಳುಗಳ ನೆರವಿಗೆ ಧಾವಿಸಿ, ಅವರನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಗಾಯಗೊಂಡ 23 ಮಂದಿಯನ್ನು ಕುಂದಾಪುರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಮೂವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ಟೀಮ್ ಎಂ.ಎಚ್.ಐ ಆಪತ್ಬಾಂಧವ ಆಂಬುಲೆನ್ಸ್ ತಂಡದ ಇಬ್ರಾಹಿಂ ಗಂಗೊಳ್ಳಿ, ಅಬ್ರಾರ್ ಹಾಗೂ ಸ್ವಯಂಸೇವಕ ವಿಕಾಸ್ ಅವರು ಎರಡು ಆಂಬುಲೆನ್ಸ್ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಸಿದ್ದಾರೆ. ಜೊತೆಗೆ ಹೆಮ್ಮಾಡಿಯ ರಿಕ್ಷಾ ಚಾಲಕರಾದ ಶರತ್, ಕೃಷ್ಣ ಹಾಗೂ ಪ್ರಶಾಂತ್ ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯ ನೆರವು ನೀಡಿದರು. ಅಪಘಾತದಿಂದ ಕೆಲಕಾಲ ಅರಾಟೆ ಸೇತುವೆ ಸಮೀಪ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು, ಸೇತುವೆಯ ಬಳಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಏಕಮುಖ ಸಂಚಾರದ ಬದಲಿಗೆ ಒಂದೇ ರಸ್ತೆಯಲ್ಲಿ ಎರಡು ಕಡೆಯ ವಾಹನ ಸಂಚರಿಸಲು ಅವಕಾಶ ನೀಡಲಾಗಿತ್ತು. ಇದನ್ನು ಗಮನಿಸದೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.


