ಉಡುಪಿ: ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ವರಾಹಿ ಯೋಜನೆ ಕಾಮಗಾರಿಗೆ ಅಗತ್ಯವಿರುವ 17.49 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಕೇಂದ್ರ ಅರಣ್ಯ ಸಚಿವಾಲಯಕ್ಕೆ ಭೇಟಿ ನೀಡಿ ಇಲಾಖೆಯ ಅರಣ್ಯ ಮಹಾನಿರೀಕ್ಷಕ ರಘುಪ್ರಸಾದ್ ಅವರನ್ನು ಭೇಟಿಯಾಗಿ ಯೋಜನೆಯ ಪ್ರಗತಿ ಹಾಗೂ ಬಾಕಿ ಇರುವ ಕಾಮಗಾರಿಗಳ ಕುರಿತು ಚರ್ಚಿಸಿದರು.

ವರಾಹಿ ಯೋಜನೆಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿ 12.95 ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಈ ಕಾಮಗಾರಿ ಪೂರ್ಣಗೊಳಿಸಲು 17.49 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ ಎಂದು ಸಂಸದರು ಅಧಿಕಾರಿಗಳ ಗಮನಕ್ಕೆ ತಂದರು.ವರಾಹಿ ಯೋಜನೆ ಪೂರ್ಣಗೊಂಡಲ್ಲಿ ತಮ್ಮ ಲೋಕಸಭಾ ಕ್ಷೇತ್ರದ ಕುಂದಾಪುರ ಹಾಗೂ ಬ್ರಹ್ಮಾವರ ತಾಲ್ಲೂಕುಗಳ ಸುಮಾರು 2,723 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಜತೆಗೆ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಪೂರೈಕೆಯಲ್ಲೂ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವಿವರಿಸಿದರು.

ಮನವಿಗೆ ಸ್ಪಂದಿಸಿದ ಕೇಂದ್ರ ಅರಣ್ಯ ಇಲಾಖೆಯ ಮಹಾನಿರೀಕ್ಷಕ ರಘುಪ್ರಸಾದ್ ಅವರು, ಕಳೆದ ನಾಲ್ಕು ವರ್ಷಗಳಿಂದ ಈ ಕಡತ ತಮ್ಮ ಇಲಾಖೆಯಲ್ಲಿ ಬಾಕಿ ಇರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರದಿಂದ ಅಗತ್ಯ ವರದಿ ಪಡೆದುಕೊಂಡು ತ್ವರಿತವಾಗಿ ಅನುಮೋದನೆ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಅನುಮೋದನೆ ದೊರೆತಲ್ಲಿ ವರಾಹಿ ಯೋಜನೆಯ ಬಾಕಿ ಕಾಮಗಾರಿಗಳಿಗೆ ವೇಗ ದೊರೆಯಲಿದ್ದು, ಯೋಜನೆ ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


