Monday, August 10, 2026

spot_img

ರಾಷ್ಟ್ರೀಯ ಹೆದ್ದಾರಿ 66 ಹೆಚ್ಚುವರಿ ಕಾಮಗಾರಿ ಶೀಘ್ರ ಆರಂಭ

ಉಡುಪಿ: ಕುಂದಾಪುರದಿಂದ ಹೆಜಮಾಡಿ ಹಾಗೂ ಹೆಜಮಾಡಿಯಿಂದ ಕೇರಳ ಗಡಿಯವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 66ರ ವಿವಿಧ ಹೆಚ್ಚುವರಿ ಕಾಮಗಾರಿಗಳಿಗೆ ಸಂಬಂಧಿಸಿದ ಡಿಪಿಆರ್ ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗಿದ್ದು, ಬಾಕಿ ಕಾಮಗಾರಿಗಳನ್ನು ಶೀಘ್ರ ಆರಂಭಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಯಲ್ಲಿ ಕೇಳಿದ ಲಿಖಿತ ಪ್ರಶ್ನೆ ಸಂಖ್ಯೆ 3176ಕ್ಕೆ ಸಚಿವರು ನೀಡಿದ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

ಕುಂದಾಪುರದಿಂದ ಹೆಜಮಾಡಿವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರದಟ್ಟಣೆ, ರಸ್ತೆ ಸುರಕ್ಷತೆ ಹಾಗೂ ಅಪಘಾತ ತಡೆಗೆ ಅಗತ್ಯವಿರುವ ಹೆಚ್ಚುವರಿ ಕಾಮಗಾರಿಗಳ ಕುರಿತು ಸಂಸದರು ಪ್ರಶ್ನಿಸಿದ್ದರು. ಹೆದ್ದಾರಿಯ ವಿವಿಧೆಡೆ ಸರ್ವಿಸ್ ರಸ್ತೆಗಳು, ಅಗತ್ಯವಿರುವ ಫ್ಲೈಓವರ್‌ಗಳು ಹಾಗೂ ಅಂಡರ್‌ಪಾಸ್‌ಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳುವ ಅಗತ್ಯವನ್ನು ಅವರು ಪ್ರಸ್ತಾಪಿಸಿದ್ದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಲಹಾ ಸಂಸ್ಥೆಯೊಂದನ್ನು ಈಗಾಗಲೇ ನೇಮಿಸಿದ್ದು, 2026ರ ಮೇ 14ರಿಂದ ಡಿಪಿಆರ್ ಸಿದ್ಧಪಡಿಸುವ ಯೋಜನಾ ವರದಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಕುಂದಾಪುರದಿಂದ ಹೆಜಮಾಡಿ ಹಾಗೂ ಮುಂದುವರಿದು ಕೇರಳ ಗಡಿಯವರೆಗೆ ವಾಹನಗಳ ಸಂಚಾರದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು.

ಕಲ್ಯಾಣಪುರ–ಸಂತೆಕಟ್ಟೆ ಮೇಲ್ಸೇತುವೆ, ಅಂಬಲಪಾಡಿ ಬ್ರಿಡ್ಜ್ ಹಾಗೂ ಕಟಪಾಡಿ ಅಂಡರ್‌ಪಾಸ್ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿಯ ಬಗ್ಗೆಯೂ ಸಂಸದರು ಕೇಂದ್ರ ಸಚಿವರ ಗಮನ ಸೆಳೆದಿದ್ದರು. ಸಚಿವ ಗಡ್ಕರಿ ನೀಡಿರುವ ಉತ್ತರದಲ್ಲಿ ಸಂತೆಕಟ್ಟೆ ಮೇಲ್ಸೇತುವೆ ಬಳಿಯ ಹೋಟೆಲ್ ದೋಣಿಮನೆ ಸೇರಿದಂತೆ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ. ಹೆದ್ದಾರಿ 66ಕ್ಕೆ ಸಂಬಂಧಿಸಿದ ಬಾಕಿ ಕಾಮಗಾರಿಗಳಿಗೆ ವೇಗ ನೀಡುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದು, ಈ ಕಾಮಗಾರಿಗಳು ಪೂರ್ಣಗೊಂಡರೆ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles