ಉಡುಪಿ: ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಸೋಮವಾರ ಆದೇಶಿಸಿದೆ. ಉತ್ತರಾಖಂಡ ಮೂಲದ ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ ಹಾಗೂ ಬಿಹಾರ ಮೂಲದ ಜಿಯಾವುಲ್ಲಾ ಅಲಿಯಾಸ್ ದೀಪಕ್ ಪೊಲೀಸ್ ಕಸ್ಟಡಿಗೆ ಒಳಗಾದ ಆರೋಪಿಗಳು. ಇಬ್ಬರೂ ಇದುವರೆಗೆ ನ್ಯಾಯಾಂಗ ಬಂಧನದಲ್ಲಿದ್ದರು.

ಪ್ರಕರಣದ ತನಿಖಾಧಿಕಾರಿ ಹಾಗೂ ಕಾಪು ಪೊಲೀಸ್ ನಿರೀಕ್ಷಕ ಅಝ್ಮತ್ ಅಲಿ ನೇತೃತ್ವದ ಪೊಲೀಸರು ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪ್ರಕರಣದ ತನಿಖೆಗಾಗಿ ಹೆಚ್ಚಿನ ವಿಚಾರಣೆ ನಡೆಸಬೇಕಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಪುರುಷೋತ್ತಮ ಅವರು ಇಬ್ಬರು ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಗಳ ಪಾತ್ರದ ಕುರಿತು ಈಗಾಗಲೇ ತನಿಖೆ ನಡೆಸಿರುವ ಪೊಲೀಸರು, ಇದೀಗ ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಹತ್ಯೆಗೆ ಯಾರು ಸಂಚು ರೂಪಿಸಿದ್ದರು, ಹತ್ಯೆಯ ಹಿಂದಿನ ನಿಖರ ಕಾರಣವೇನು, ಆರೋಪಿಗಳಿಗೆ ಯಾರಿಂದ ಸೂಚನೆ ಅಥವಾ ನೆರವು ದೊರಕಿತ್ತು ಎಂಬ ಪ್ರಮುಖ ಅಂಶಗಳ ಕುರಿತು ವಿಚಾರಣೆ ನಡೆಯುವ ಸಾಧ್ಯತೆಯಿದೆ.

ಅಲ್ಲದೆ, ಹತ್ಯೆಗೂ ಮುನ್ನ ಆರೋಪಿಗಳು ನಡೆಸಿದ ಚಲನವಲನ, ಬಳಸಿದ ವಾಹನಗಳು, ಸಂಪರ್ಕದಲ್ಲಿದ್ದ ವ್ಯಕ್ತಿಗಳು ಹಾಗೂ ಹತ್ಯೆಯ ಬಳಿಕ ಪರಾರಿಯಾಗಲು ಕೈಗೊಂಡಿದ್ದ ಕ್ರಮಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿಲ್ಲ. ಆರೋಪಿಗಳ ಹೇಳಿಕೆ ಹಾಗೂ ಲಭ್ಯವಾಗಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ಹತ್ಯೆಯ ಸಂಚಿನಲ್ಲಿ ಇತರರ ಪಾತ್ರವಿದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸುಳಿವುಗಳು ಲಭ್ಯವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಡೇವಿಡ್ ಡಿಸೋಜ ಅವರ ಹತ್ಯೆ ಪ್ರಕರಣವು ಮುದರಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಹಿಂದೆ ಇರುವ ಸಂಪೂರ್ಣ ಜಾಲವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.


