Thursday, October 29, 2026

spot_img

ಮನೆ ಠೇವಣಿ ವಿವಾದಕ್ಕೆ ಆಸಿಡ್ ದಾಳಿ; ತಲವಾರಿನಿಂದ ಕಡಿದು ಕೊಲ್ಲಲು ಯತ್ನ

ಉಡುಪಿ: ಬಾಡಿಗೆ ಮನೆಯ ಮುಂಗಡ ಹಣ ಹಿಂದಿರುಗಿಸುವ ವಿಚಾರವಾಗಿ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ, ಅಂಗಡಿ ಮಾಲೀಕನ ಮೇಲೆ ಆಸಿಡ್ ಎರಚಿ, ತಲವಾರಿನಿಂದ ಕಡಿದು ಕೊಲ್ಲಲು ಯತ್ನಿಸಿದ ಘಟನೆ ಉಡುಪಿಯ ರೈಲ್ವೆ ನಿಲ್ದಾಣ ರಸ್ತೆಯ ಕಲ್ಕೂರು ಬಿಲ್ಡಿಂಗ್ ಬಳಿ ಅ. 28ರಂದು ನಡೆದಿದೆ. ಆಸಿಡ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಬುಡ್ನಾರು ಕುಂಜಿಬೆಟ್ಟಿನ ನವೀನ್ ಕುಮಾರ್ (58) ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಸುಟ್ಟ ಗಾಯಗಳ ಚಿಕಿತ್ಸಾ ವಿಭಾಗದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಸುರೇಶ್ ಆಚಾರ್ಯ (48) ಎಂಬಾತನನ್ನು ಉಡುಪಿ ನಗರ ಪೊಲೀಸರು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ನವೀನ್ ಕುಮಾರ್ ಅವರು ಕಲ್ಕೂರು ಬಿಲ್ಡಿಂಗ್‌ನ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದು, ಅವರ ವಿಷ್ಣುಮೂರ್ತಿ ನಗರದ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆಗೆ ವಾಸವಿದ್ದ ಸುರೇಶ್ ಆಚಾರ್ಯ ಇತ್ತೀಚೆಗೆ ಮನೆ ಖಾಲಿ ಮಾಡಿದ್ದ. ಮನೆಗೆ ಮುಂಗಡವಾಗಿ ನೀಡಿದ್ದ 20 ಸಾವಿರವನ್ನು ಹಿಂದಿರುಗಿಸುವ ವಿಚಾರದಲ್ಲಿ ಇಬ್ಬರ ನಡುವೆ ವಿವಾದ ಉಂಟಾಗಿತ್ತು.

ಮನೆ ಖಾಲಿ ಮಾಡಿದ ಬಳಿಕ ಗೋಡೆ ಹಾಗೂ ಟ್ಯಾಪ್‌ಗಳಿಗೆ ಹಾನಿಯಾಗಿರುವುದನ್ನು ಗಮನಿಸಿದ ನವೀನ್ ಕುಮಾರ್, ಬಾಕಿ ಬಾಡಿಗೆ ಮತ್ತು ದುರಸ್ತಿ ವೆಚ್ಚವನ್ನು ಮುಂಗಡ ಹಣದಲ್ಲಿ ಕಡಿತಗೊಳಿಸಿ ಉಳಿದ ಮೊತ್ತ ನೀಡುವುದಾಗಿ ತಿಳಿಸಿದ್ದರು. ಆದರೆ, ಇದಕ್ಕೆ ಒಪ್ಪದ ಸುರೇಶ್ ಆಚಾರ್ಯ ಸಂಪೂರ್ಣ 20 ಸಾವಿರ ನೀಡಬೇಕೆಂದು ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಅ. 23ರಂದು ಅಂಗಡಿಗೆ ಬಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಅ. 28ರಂದು ಸಂಜೆ ಸುಮಾರು 3.30ರ ವೇಳೆಗೆ ನವೀನ್ ಕುಮಾರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಸುರೇಶ್ ಆಚಾರ್ಯ, ಮುಂಗಡ ಹಣದ ವಿಚಾರವಾಗಿ ಜಗಳವಾಡಿದ್ದಾನೆ. ಬಳಿಕ ಹೊರಗೆ ಹೋಗಿ ಸ್ಕೂಟರ್‌ನಿಂದ ಬಾಟಲಿಯೊಂದನ್ನು ಹಾಗೂ ತಲವಾರನ್ನು ತಂದು, ಆಸಿಡ್ ಎರಚಿ ಸುಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿ, ನಂತರ ನವೀನ್ ಕುಮಾರ್ ಅವರ ಮೇಲೆ ಆಸಿಡ್ ಎರಚಿದ್ದಲ್ಲದೆ, ತಲವಾರಿನಿಂದ ಕಡಿದು ಕೊಲ್ಲಲು ಮುಂದಾಗಿದ್ದಾನೆ. ಈ ವೇಳೆ ನವೀನ್ ಕುಮಾರ್ ತಪ್ಪಿಸಿಕೊಂಡು ಅವಿತುಕೊಂಡಿದ್ದಾರೆ. ಆದರೂ ಆಸಿಡ್ ದಾಳಿಯಿಂದ ಅವರ ಬಲಗೈ, ಎಡಗೈ, ಸೊಂಟ, ಹೊಟ್ಟೆ, ಪಾದ ಹಾಗೂ ಮುಖದ ಭಾಗಗಳಿಗೆ ಸುಟ್ಟ ಗಾಯಗಳಾಗಿವೆ.

ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸರು ಶಿವಳ್ಳಿ ಗ್ರಾಮದ ಎಂಜಿಎಂ ಮೈದಾನದ ಬಳಿ ಸುರೇಶ್ ಆಚಾರ್ಯನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.  ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟರ್  ಹಾಗೂ ತಲವಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ತನ್ನ ಮನೆಯಲ್ಲಿ ಚಿನ್ನಾಭರಣಗಳ ಕುಸುರಿ ಕೆಲಸ ಮಾಡುತ್ತಿದ್ದು, ಅರೆಕಾಲಿಕವಾಗಿ ಸ್ವಿಗ್ಗಿ ಡೆಲಿವರಿ ಕೆಲಸವನ್ನೂ ಮಾಡುತ್ತಿದ್ದ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles