ಉಡುಪಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ನೀಡಲಾಗುವ ಆರ್ಥಿಕ ನೆರವನ್ನು ಪಡೆಯಲು ಫಲಾನುಭವಿ ರೈತರು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇ-ಕೆವೈಸಿ ಪೂರ್ಣಗೊಳಿಸದ ರೈತರಿಗೆ ಯೋಜನೆಯ ಮುಂದಿನ ಕಂತಿನ ಆರ್ಥಿಕ ನೆರವು ಬಿಡುಗಡೆಯಾಗುವುದಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.

ಉಡುಪಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ 1,82,174 ಮಂದಿ ರೈತರು ನೋಂದಾಯಿಸಿಕೊಂಡಿದ್ದಾರೆ. ಇವರ ಪೈಕಿ ಉಡುಪಿ ತಾಲೂಕಿನಲ್ಲಿ 55,466, ಕುಂದಾಪುರ ತಾಲೂಕಿನಲ್ಲಿ 73,985 ಹಾಗೂ ಕಾರ್ಕಳ ತಾಲೂಕಿನಲ್ಲಿ 35,821 ಮಂದಿ ಸೇರಿದಂತೆ ಒಟ್ಟು 1,65,272 ರೈತ ಫಲಾನುಭವಿಗಳು ಇದುವರೆಗೆ ಯೋಜನೆಯಡಿ ಆರ್ಥಿಕ ನೆರವು ಪಡೆದಿದ್ದಾರೆ.ಇ-ಕೆವೈಸಿ ಪೂರ್ಣಗೊಳಿಸುವಂತೆ ಕೃಷಿ ಇಲಾಖೆಯಿಂದ ಈಗಾಗಲೇ ರೈತರಿಗೆ ಮಾಹಿತಿ ನೀಡಲಾಗಿದ್ದರೂ, ಇನ್ನೂ ಕೆಲವು ಫಲಾನುಭವಿಗಳು ಇ-ಕೆವೈಸಿ ಮಾಡಿಸಿಕೊಳ್ಳದೆ ಇರುವುದು ಗಮನಕ್ಕೆ ಬಂದಿದೆ.

ಇ-ಕೆವೈಸಿ ಬಾಕಿ ಇರುವ ರೈತರು ಯಾವುದೇ ವಿಳಂಬ ಮಾಡದೆ ಆಧಾರ್ ಕಾರ್ಡ್ ಹಾಗೂ ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ಇ-ಕೆವೈಸಿ ಪೂರ್ಣಗೊಳಿಸದ ಫಲಾನುಭವಿಗಳಿಗೆ ಮುಂದಿನ ಕಂತಿನ ಆರ್ಥಿಕ ನೆರವು ದೊರೆಯದಿರುವ ಸಾಧ್ಯತೆ ಇದೆ. ಆದ್ದರಿಂದ ಅರ್ಹ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೂಡಲೇ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.


