ಉಡುಪಿ : ಉಡುಪಿ ಜಿಲ್ಲೆಯ ಕರಾವಳಿ, ಪ್ರಕೃತಿ ಹಾಗೂ ಜಲ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡು, ಧಾರ್ಮಿಕ ಪ್ರವಾಸೋದ್ಯಮದ ಜತೆಗೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್ ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ ಅಧಿಕಾರಿಗಳ ತಂಡದೊಂದಿಗೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಪ್ರವಾಸಿಗರು ಉಡುಪಿಯಲ್ಲಿ ಹೆಚ್ಚಿನ ದಿನಗಳ ಕಾಲ ತಂಗುವಂತೆ ಹೊಸ ಪ್ರವಾಸಿ ಆಕರ್ಷಣೆಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ತಿಳಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುವ ಪ್ರವಾಸಿಗರು ಹಾಗೂ ಭಕ್ತರನ್ನು ಕರಾವಳಿ ಮತ್ತು ನೈಸರ್ಗಿಕ ಪ್ರವಾಸಿ ತಾಣಗಳತ್ತ ಸೆಳೆಯುವ ರೀತಿಯಲ್ಲಿ ಸಮಗ್ರ ಯೋಜನೆ ರೂಪಿಸುವಂತೆ ಅವರು ಸೂಚಿಸಿದರು.

ತ್ರಾಸಿ–ಮರವಂತೆ ಬೀಚ್ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಡಾ. ರಾಮ್ ಪ್ರಸಾತ್ ಮನೋಹರ್, ಕಾಮಗಾರಿಗಳಿಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ಎರಡುರಿಂದ ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ನಿರ್ದೇಶನ ನೀಡಿದರು. ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳು ಹಾಗೂ ಮೂಲಸೌಕರ್ಯ ಕಲ್ಪಿಸುವಂತೆ ಸೂಚಿಸಲಾಯಿತು. ಸೋಮೇಶ್ವರ ಬೀಚ್‌ನಲ್ಲಿಯೂ ಪ್ರವಾಸಿಗರಿಗೆ ಅಗತ್ಯವಿರುವ ಪೂರಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವನ್ನು ಮತ್ತಷ್ಟು ಆಕರ್ಷಕಗೊಳಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

ಕುಂದಾಪುರದ ಕೋಡಿ ಹಿನ್ನೀರು ಪ್ರದೇಶದಲ್ಲಿ ಪರಿಸರ ಸ್ನೇಹಿ ಹೌಸ್‌ಬೋಟ್ ಹಾಗೂ ಜಲ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಲಾಯಿತು. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಹಿನ್ನೀರಿನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಪ್ರವಾಸಿಗರು ಜಿಲ್ಲೆಯಲ್ಲಿ ಹೆಚ್ಚಿನ ದಿನಗಳ ಕಾಲ ತಂಗುವಂತೆ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದರಿಂದ ಹೋಟೆಲ್, ಸಾರಿಗೆ, ಆಹಾರ, ಪ್ರವಾಸಿ ಸೇವೆಗಳು ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ. ಇದರ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ಮತ್ತು ಉದ್ಯಮಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಕಲೆ, ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಕರಾವಳಿಯ ವಿಶಿಷ್ಟ ಜೀವನಶೈಲಿಯನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಿ ಪ್ರವಾಸಿಗರಿಗೆ ಸಮಗ್ರ ಅನುಭವ ನೀಡುವಂತೆ ಯೋಜನೆ ರೂಪಿಸುವುದಕ್ಕೂ ಒತ್ತು ನೀಡಲಾಗಿದೆ. ಕೆ.ಜೆ. ಜಾರ್ಜ್ ಅವರು, ಉಡುಪಿ ಧಾರ್ಮಿಕ ಪ್ರವಾಸೋದ್ಯಮದ ಜತೆಗೆ ಅಪಾರ ಕರಾವಳಿ ಹಾಗೂ ನೈಸರ್ಗಿಕ ಪ್ರವಾಸೋದ್ಯಮ ಸಾಮರ್ಥ್ಯ ಹೊಂದಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವವರು ಜಿಲ್ಲೆಯ ಇತರೆ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಹೆಚ್ಚಿನ ದಿನಗಳ ಕಾಲ ತಂಗುವಂತಹ ವ್ಯವಸ್ಥೆ ರೂಪಿಸುವುದರಿಂದ ಸ್ಥಳೀಯ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಆರ್ಷದ್ ಮಾತನಾಡಿ, ಕರಾವಳಿ ಮತ್ತು ಮಲೆನಾಡಿನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಮಗ್ರವಾಗಿ ಬಳಸಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಕಡಲತೀರಗಳು, ಹಿನ್ನೀರು ಹಾಗೂ ನೈಸರ್ಗಿಕ ತಾಣಗಳ ಅಭಿವೃದ್ಧಿಯ ಜತೆಗೆ ಮಲೆನಾಡಿನ ಪ್ರವಾಸಿ ಆಕರ್ಷಣೆಗಳನ್ನೂ ಪರಿಣಾಮಕಾರಿಯಾಗಿ ಪರಿಚಯಿಸುವ ಮೂಲಕ ಪ್ರವಾಸಿಗರ ವಾಸ್ತವ್ಯ ಅವಧಿ ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ತಂಡದಲ್ಲಿ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ್, ಉಡುಪಿ ಸಹಾಯಕ ನಿರ್ದೇಶಕಿ ವಿದ್ಯಾವತಿ, ಐಪಿಇ ಗ್ಲೋಬಲ್ ತಂಡದ ಯೋಜನಾ ನಿರ್ವಹಣಾ ಘಟಕದ ಪ್ರತಿನಿಧಿ ಹೇಮಲತಾ ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಮತ್ತು ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಸಂಸ್ಥೆಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.


