ಉಡುಪಿ: ನವರಾತ್ರಿ ಹಬ್ಬದ ಸಂಭ್ರಮದ ನಡುವೆ ಕರಾವಳಿಯ ಸಾಂಪ್ರದಾಯಿಕ ಕದಿರು ಕಟ್ಟುವ ಹಬ್ಬವನ್ನು ಪರ್ಕಳದ ಮಹಾಲಿಂಗೇಶ್ವರ, ಮಹಾಗಣಪತಿ ಹಾಗೂ ಅಯ್ಯಪ್ಪ ದೇವಸ್ಥಾನಗಳಲ್ಲಿ ಭಕ್ತಿಭಾವದಿಂದ ಆಚರಿಸಲು ಸಿದ್ಧತೆಗಳು ನಡೆದವು.

ಈ ಹಿನ್ನೆಲೆಯಲ್ಲಿ ಪರ್ಕಳದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟ್ಟುವ ಹಬ್ಬಕ್ಕೆ ಅಗತ್ಯವಾದ ಕದಿರು, ಮಾವಿನ ಎಲೆ, ಹಲಸಿನ ಎಲೆ, ಕದಿರು ಕಟ್ಟಲು ಬಳಸುವ ದಾರ ಸೇರಿದಂತೆ ಸಂಪ್ರದಾಯದ ಎಲ್ಲ ಪರಿಕರಗಳನ್ನು ಒಂದೇ ಕಡೆ ಸಂಗ್ರಹಿಸಿ ಭಕ್ತರಿಗೆ ವಿತರಿಸುವ ಕಾರ್ಯಕ್ರಮ ನಡೆಯಿತು.

ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ಭಕ್ತಿಪೂರ್ವಕವಾಗಿ ಕದಿರು ಹಾಗೂ ಇತರ ಪರಿಕರಗಳನ್ನು ಪಡೆದುಕೊಂಡರು. ಹಬ್ಬದ ಸಾಂಪ್ರದಾಯಿಕ ಆಚರಣೆಯನ್ನು ಮುಂದುವರಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಭಕ್ತರ ಸಮೂಹ ಪಾಲ್ಗೊಂಡು ಸಂಭ್ರಮಿಸಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಸ್ಥಾಯಿ ಸಮಿತಿ ಅಧ್ಯಕ್ಷ ಮುರಳೀಧರ ನಕ್ಷತ್ರಿ, ಪರ್ಕಳ ನಟರಾಜ್, ಅರ್ಚಕರಾದ ವೇದಮೂರ್ತಿ ಪದ್ಮನಾಭ ಭಾಯರಿ, ನಾರಾಯಣ ಭಟ್, ಕೆಳಪರ್ಕಳದ ಶ್ರೀಪತಿ ಉಪಾಧ್ಯಾಯ, ಸಮಿತಿಯ ಪದಾಧಿಕಾರಿಗಳಾದ ಸುಧಾಕರ ಪೂಜಾರಿ, ಸುಖಾನಂದ ಶೆಟ್ಟಿಗಾರ್, ಸುಧೀರ್ ಶೆಟ್ಟಿ, ನಾಗೇಶ ನಾಯಕ ಹಾಗೂ ಸಮಾಜಸೇವಕಿ ರಮ್ಯ ರಮಾನಂದ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


