ಉಡುಪಿ : ಜಾಗದ ವಿವಾದಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಗಲಾಟೆ ತೀವ್ರಗೊಂಡಿದ್ದು, ಗರ್ಭಿಣಿ ಮಹಿಳೆ ಮೇಲೆ ಹಲ್ಲೆ, ಮನೆಗೆ ಹಾನಿ, ಮಾರಣಾಂತಿಕ ದಾಳಿ ಹಾಗೂ ಜೀವ ಬೆದರಿಕೆ ಆರೋಪಗಳು ಕೇಳಿಬಂದಿವೆ. ಘಟನೆಗೆ ಸಂಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಕಾಡೂರು ಗ್ರಾಮದ ಜಾಗದ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಎರಡೂ ಕಡೆಯವರ ನಡುವೆ ಈ ಹಿಂದಿನಿಂದಲೂ ವಿವಾದವಿತ್ತು ಎನ್ನಲಾಗಿದೆ. ಆ.23ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12 ಗಂಟೆಯ ನಡುವೆ ಶ್ಯಾಮ ನಾಯ್ಕ, ನಂದಕಿಶೋರ, ರಾಜೇಶ ನಾಯ್ಕ, ಕೃಷ್ಣ ನಾಯ್ಕ, ವಸಂತಿ, ಬಾಬಿ, ಸುಮತಿ, ವಂದನ ಹಾಗೂ ನಾಲ್ವರು ಅಪರಿಚಿತರು ಪಿಣಿಯ ನಾಯ್ಕ ಅವರ ಪಿತೂರಿ ಮೇರೆಗೆ ತನ್ನ ಮನೆಗೆ ಬಂದಿದ್ದಾರೆ ಎಂದು ವೀಣಾ (32) ದೂರಿದ್ದಾರೆ.

ಆರೋಪಿಗಳು ಗರ್ಭಿಣಿಯಾಗಿದ್ದ ವೀಣಾ ಅವರ ಮೇಲೆ ಹಲ್ಲೆ ನಡೆಸಿ, ಮನೆಯ ಸಿಸಿ ಕ್ಯಾಮೆರಾ ಹಾಗೂ ಕಿಟಕಿ ಗಾಜುಗಳಿಗೆ ಹಾನಿ ಮಾಡಿದ್ದಾರೆ. ಮನೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ವೀಣಾ ಅವರ ಮೈದುನನ ಪತ್ನಿ ಚಂದ್ರವತಿ ಅವರ ಮೇಲೆಯೂ ಕಲ್ಲು ಹಾಗೂ ಎಳನೀರಿನ ಸಿಪ್ಪೆಯಿಂದ ಹಲ್ಲೆ ನಡೆಸಿದ್ದು, ಮನೆಯ ಸಾಕು ನಾಯಿಗೂ ಹೊಡೆದು ಬಳಿಕ ವಾಹನಗಳಲ್ಲಿ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಇದರ ಬೆನ್ನಲ್ಲೇ ಆ.25ರಂದು ಮಧ್ಯಾಹ್ನ 12 ಗಂಟೆಗೆ ಇದೇ ಜಾಗದ ವಿಚಾರವಾಗಿ ಸರ್ವೆ ನಂ.12/9ರ ಜಾಗಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಆರೋಪಿಗಳ ವಿರುದ್ಧ ಮಧ್ಯಂತರ ತಡೆಯಾಜ್ಞೆ ಇದೆ ಎಂದು ಸುಮತಿ ಬಾಯಿ (52) ದೂರಿನಲ್ಲಿ ತಿಳಿಸಿದ್ದಾರೆ. ಸುಮತಿ ಬಾಯಿ ಅವರು ಶ್ಯಾಮ ನಾಯ್ಕ ಹಾಗೂ ಬಾಬಿ ಅವರೊಂದಿಗೆ ಅಡಿಕೆ ತೋಟದ ಕೆಲಸಕ್ಕೆ ತೆರಳಿದ್ದ ವೇಳೆ ಮಹೇಂದ್ರ, ಅಕ್ಕಯ್ಯ, ಚಂದ್ರವತಿ, ವೀಣಾ, ಮಹೇಶ, ಮಮತ ಸೇರಿದಂತೆ ಇತರರು ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿ ಜಾಗಕ್ಕೆ ಪ್ರವೇಶಿಸಿ ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ಕಲ್ಲು, ಕತ್ತಿ, ಬಾಟಲಿ, ದೊಣ್ಣೆ ಹಾಗೂ ತಲವಾರುಗಳನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ವೇಳೆ ಮಹೇಂದ್ರ ನಾಯ್ಕ ಬೀಸಿದ ಕತ್ತಿಯಿಂದ ಶ್ಯಾಮ ನಾಯ್ಕ ಅವರ ಕೈಬೆರಳುಗಳಿಗೆ ಗಾಯವಾಗಿದ್ದು, ಅಕ್ಕಯ್ಯ ಬೀಸಿದ ದೊಣ್ಣೆಯೇಟಿನಿಂದ ಬಾಬಿ ಅವರ ತುಟಿಗೆ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಲ್ಲದೆ, ಜಾಗದಲ್ಲಿದ್ದ ಅಡಿಕೆ ಮರಗಳನ್ನು ಕಡಿದು, ಪಂಪ್‌ಸೆಟ್‌ನ ಪೈಪ್‌ಗಳನ್ನು ಒಡೆದು ಹಾಗೂ ಕುಡಿಯುವ ನೀರಿನ ಟ್ಯಾಂಕ್‌ಗೆ ಹಾನಿ ಮಾಡಿ ಆಸ್ತಿ ನಷ್ಟ ಉಂಟುಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಎರಡೂ ಕಡೆಯ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


