ಉಡುಪಿ : ಅಂತರಾಷ್ಟ್ರೀಯ ರೆಡ್ ಕ್ರಾಸ್ ಕಳೆದ ಒಂದೂವರೆ ಶತಮಾನಗಳಿಂದ ಜಗತ್ತಿನಾದ್ಯಂತ ಮಾನವೀಯ ಸೇವೆ ಸಲ್ಲಿಸುತ್ತಿದ್ದು, ಪ್ರಕೃತಿ ವಿಕೋಪ ಹಾಗೂ ಯುದ್ಧ ಸಂದರ್ಭಗಳಲ್ಲಿ ನೀಡಿದ ಸೇವೆ ಅನನ್ಯವಾಗಿದೆ. ಇದೇ ಕಾರಣಕ್ಕೆ ಸಂಸ್ಥೆ ನಾಲ್ಕು ಬಾರಿ ನೊಬೆಲ್ ಪ್ರಶಸ್ತಿಗೆ ಭಾಜನವಾಗಿದೆ ಎಂದು ಜಿಲ್ಲಾ ರೆಡ್ ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಹೇಳಿದರು.

ಜಿಲ್ಲಾ ರೆಡ್ ಕ್ರಾಸ್ ಘಟಕದಲ್ಲಿ ರೆಡ್ ಕ್ರಾಸ್ ದಿನಾಚರಣೆಯ ಅಂಗವಾಗಿ ಸಂಸ್ಥಾಪಕ ಹೆನ್ರಿ ಡ್ಯುನಾಂಟ್ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಅವರು ಮಾತನಾಡಿದರು. ಉಡುಪಿ ಜಿಲ್ಲಾ ರೆಡ್ ಕ್ರಾಸ್ ಘಟಕವು ರಾಜ್ಯದಲ್ಲಿಯೇ ಪ್ರತಿಷ್ಠಿತ ಘಟಕವಾಗಿ ಗುರುತಿಸಿಕೊಂಡಿದ್ದು, ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸೇವೆ ಸಲ್ಲಿಸುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ, ರೆಡ್ ಕ್ರಾಸ್ ಸಂಸ್ಥೆಯ ಇತಿಹಾಸ ಹಾಗೂ ಸೇವಾ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಶ್ರವಣ ಸಾಧನಗಳು ಹಾಗೂ ಗೃಹಪಯೋಗಿ ಸಾಮಗ್ರಿಗಳನ್ನು ವಿತರಿಸಲಾಯಿತು.


ಹೈಕೋರ್ಟ್ ವಕೀಲ ಶ್ರೀಕಾಂತ್ ಶಂಕರನಾರಾಯಣ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಜಯಶ್ರೀ, ರೆಡ್ ಕ್ರಾಸ್, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲಾ ರೆಡ್ ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿದರು.



