ಉಡುಪಿ : ಮನೆಯ ಬೆಡ್ರೂಮ್ನಲ್ಲಿದ್ದ ಗೋಡ್ರೇಜ್ನೊಳಗೆ ಇಟ್ಟಿದ್ದ ಸುಮಾರು 56 ಗ್ರಾಂ ತೂಕದ 8 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಕುಂಜೆ ಗ್ರಾಮದಲ್ಲಿ ನಡೆದಿದೆ. ಕರ್ಕುಂಜೆ ಗ್ರಾಮದ ಗಂಗಾಧರ ಮಂಜರು (55) ಅವರ ಮನೆಯಲ್ಲಿ ಈ ಕಳವು ನಡೆದಿದೆ.

ಮನೆಯ ಬೆಡ್ರೂಮ್ನ ಗೋಡ್ರೇಜ್ನಲ್ಲಿ 4 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು, 8 ಗ್ರಾಂ ತೂಕದ ಚಿನ್ನದ ಬಳೆ ಹಾಗೂ ಲಕ್ಷ್ಮೀ ಪೆಂಡೆಂಟ್ ಹೊಂದಿರುವ 40 ಗ್ರಾಂ ತೂಕದ ಚಿನ್ನದ ಸರವನ್ನು ಪರ್ಸ್ನಲ್ಲಿ ಇಡಲಾಗಿತ್ತು. ಗೋಡ್ರೇಜ್ಗೆ ಬೀಗ ಅಳವಡಿಸಿರಲಿಲ್ಲ ಎನ್ನಲಾಗಿದೆ. ಆ.17ರಂದು ಬೆಳಗ್ಗೆ 10 ಗಂಟೆಗೆ ಪಿರ್ಯಾದಿದಾರರು ಗೋಡ್ರೇಜ್ನಲ್ಲಿದ್ದ ಪರ್ಸ್ನಲ್ಲಿ ಚಿನ್ನಾಭರಣಗಳು ಇರುವುದನ್ನು ನೋಡಿದ್ದರು. ಬಳಿಕ ಸೆ.6ರಂದು ರಾತ್ರಿ 7.30ರ ಸುಮಾರಿಗೆ ಚಿನ್ನಾಭರಣಗಳನ್ನು ತೆಗೆಯಲು ನೋಡಿದಾಗ ಅವುಗಳು ಪರ್ಸ್ನಲ್ಲಿ ಇರಲಿಲ್ಲ.

ಆ.17ರಂದು ಬೆಳಗ್ಗೆ 10ರಿಂದ ಸೆ.6ರಂದು ರಾತ್ರಿ 7.30ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಗೋಡ್ರೇಜ್ನೊಳಗಿದ್ದ ಪರ್ಸ್ನಿಂದ ಒಟ್ಟು 56 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


