ಉಡುಪಿ : ಕೊಡವೂರು ಸಮೀಪದ ಗರಡಿಮಜಲು ಪ್ರದೇಶದಲ್ಲಿ ನೂತನ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ. ಮೃತರನ್ನು ಕೊಪ್ಪಳ ಮೂಲದ ರಮೇಶ್ ಎಂದು ಗುರುತಿಸಲಾಗಿದೆ.

ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಮರಳು ಹಾಗೂ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು. ಅವರಲ್ಲಿ ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದ್ದು, ಮತ್ತೋರ್ವ ಕಾರ್ಮಿಕ ರಮೇಶ್ ಮಣ್ಣಿನಡಿ ಸಿಲುಕಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಲ್ಪೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಕಾರದೊಂದಿಗೆ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.


ಸುಮಾರು ಏಳೆಂಟು ಅಡಿ ಆಳದ ಹೊಂಡದಲ್ಲಿ ಮಣ್ಣು ತುಂಬಿಕೊಂಡಿದ್ದರಿಂದ ಕಾರ್ಯಾಚರಣೆ ಕಷ್ಟಕರವಾಗಿದ್ದು, ಮೃತದೇಹವನ್ನು ಮೇಲಕ್ಕೆತ್ತಲು ಸಿಬ್ಬಂದಿಗಳು ಹರಸಾಹಸ ಪಟ್ಟರು. ಸ್ಥಳಕ್ಕೆ ಮಲ್ಪೆ ಪೊಲೀಸ್ ಠಾಣೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



