ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರಾವಳಿ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪಿಸಬೇಕೆಂಬ ಬಹುಕಾಲದ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಂಘಟಿತ ಹೋರಾಟ ರೂಪಿಸುವ ನಿಟ್ಟಿನಲ್ಲಿ ಆ.22ರಂದು ಉಡುಪಿಯಲ್ಲಿ ಮಹತ್ವದ ಸಭೆ ನಡೆಯಲಿದೆ.ಯು-ಆ್ಯಕ್ಟ್ ಹಾಗೂ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ವತಿಯಿಂದ ಅಂದು ಮಧ್ಯಾಹ್ನ 3 ಗಂಟೆಗೆ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಸಮಿತಿಯ ಸ್ಥಾಪಕ ಹಾಗೂ ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠದ ಅಗತ್ಯತೆ ಕುರಿತು ಸಭೆಯಲ್ಲಿ ಚರ್ಚಿಸಿ, ಸರ್ಕಾರದ ಮುಂದೆ ಸಂಘಟಿತವಾಗಿ ಹಕ್ಕೊತ್ತಾಯ ಮಂಡಿಸಲಾಗುವುದು. ವಕೀಲರ ಸಂಘಗಳು, ಪತ್ರಕರ್ತರ ಸಂಘ, ಸಾಮಾಜಿಕ ಸಂಸ್ಥೆಗಳು, ಉದ್ಯಮಿಗಳ ಸಂಘಟನೆಗಳು, ವಿದ್ಯಾರ್ಥಿ ಹಾಗೂ ಕಾರ್ಮಿಕ ಸಂಘಟನೆಗಳು, ಮಾಜಿ ಸೈನಿಕರು, ಆಟೋ ಚಾಲಕರು ಮತ್ತು ವಿವಿಧ ನೌಕರರ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕರಾವಳಿ ಭಾಗದ ಜನರು ಬೆಂಗಳೂರಿನ ಹೈಕೋರ್ಟ್‌ನಲ್ಲಿ ಪ್ರಕರಣಗಳನ್ನು ನಡೆಸಲು ಹಲವು ಸಂದರ್ಭಗಳಲ್ಲಿ 900ರಿಂದ 1,000 ಕಿ.ಮೀ.ಗೂ ಅಧಿಕ ದೂರ ಪ್ರಯಾಣಿಸಬೇಕಾಗಿದೆ. ಮಳೆಗಾಲದಲ್ಲಿ ಘಾಟಿ ರಸ್ತೆಗಳ ಸಂಚಾರ ಸಮಸ್ಯೆಯಿಂದ ಕಕ್ಷಿದಾರರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಮಯ ಮತ್ತು ಹಣ ವ್ಯಯಿಸಬೇಕಾಗುತ್ತದೆ ಎಂದು ಅವರು ಹೇಳಿದರು.ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಜನರಿಗೆ ಕಡಿಮೆ ವೆಚ್ಚದಲ್ಲಿ ಶೀಘ್ರ ನ್ಯಾಯ ದೊರೆಯುವ ಜತೆಗೆ ಪರಿಸರ, ಭೂ ವ್ಯಾಜ್ಯ, ಸಿಆರ್‌ಝಡ್ ಸೇರಿದಂತೆ ಸ್ಥಳೀಯ ಸಮಸ್ಯೆಗಳಿಗೆ ಕಾನೂನು ಪರಿಹಾರ ಪಡೆಯಲು ಅನುಕೂಲವಾಗಲಿದೆ. ಈ ಹೋರಾಟ ವಕೀಲರ ಸಮುದಾಯಕ್ಕೆ ಸೀಮಿತವಾಗದೆ ಇಡೀ ಕರಾವಳಿ ಜನತೆಯ ಹೋರಾಟವಾಗಬೇಕು ಎಂದು ಪ್ರೇಮ್ ಪ್ರಸಾದ್ ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪೌರ್ಣಾಮಿ ಪ್ರೇಮ್, ವಿಜಯ್ ಡಿಸೋಜಾ, ಮಾಧವ ಕಾಮತ್, ಸರಿತಾ ಹಾಗೂ ಸುರೇಶ್ ಕಾಮತ್ ಉಪಸ್ಥಿತರಿದ್ದರು.


