ಉಡುಪಿ: ಕಾರ್ಕಳ ಹಾಗೂ ಕಾಪು ತಾಲೂಕು ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ಕಲ್ಲು ಗಣಿಗಾರಿಕೆ, ಕಲ್ಲು ಸಾಗಾಟ ಹಾಗೂ ಕ್ರಷರ್ ಚಟುವಟಿಕೆ ನಡೆಸುತ್ತಿದ್ದ ಆರೋಪದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವು ವಾಹನಗಳು ಹಾಗೂ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸೆ.10ರಂದು ರಾತ್ರಿ ಕಲ್ಯಾ ಗ್ರಾಮದ ಕುಂಟಾಡಿ ಮಣ್ಣು ರಸ್ತೆಯಲ್ಲಿ ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್‌ಐ ಪ್ರಸನ್ನ ಎಂ.ಎಸ್. ಅವರು ಗಸ್ತು ನಡೆಸುತ್ತಿದ್ದ ವೇಳೆ ಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಮತ್ತೆರಡು ಟಿಪ್ಪರ್‌ಗಳು ಹಾಗೂ ಹಿಟಾಚಿ ಯಂತ್ರ ಪತ್ತೆಯಾಗಿದ್ದು, ಹರೀಶ್ ಶೆಟ್ಟಿ, ಸಂತೋಷ್ ಶೆಟ್ಟಿ ಹಾಗೂ ಇತರರು ಯಾವುದೇ ಪರವಾನಗಿ ಇಲ್ಲದೆ ಸ್ಫೋಟಕ ಬಳಸಿ ಕಲ್ಲುಗಳನ್ನು ಪುಡಿಮಾಡಿ ಸಾಗಿಸುತ್ತಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರು ಟಿಪ್ಪರ್ ಲಾರಿಗಳು ಹಾಗೂ ಒಂದು ಹಿಟಾಚಿ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.

ಇದೇ ಠಾಣಾ ವ್ಯಾಪ್ತಿಯ ಕಲ್ಯಾ ಗ್ರಾಮದ ಸಿಎಮ್‌ಎಸ್ ಸ್ಟೋನ್ ಕ್ರಷರ್‌ಗೆ ಸೆ.11ರಂದು ದಾಳಿ ನಡೆಸಿದ ಪೊಲೀಸರು, ಪರವಾನಗಿ ಅವಧಿ ಹಲವು ವರ್ಷಗಳ ಹಿಂದೆಯೇ ಮುಕ್ತಾಯಗೊಂಡಿದ್ದರೂ ಕ್ರಷರ್ ನಡೆಸಲಾಗುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ. ಮೊಹಮ್ಮದ್ ಶಫಿ ಹಾಗೂ ರಂಜಿತ್ ಅವರು ಪರವಾನಗಿ ಇಲ್ಲದೆ ಕಲ್ಲುಗಳನ್ನು ತಂದು ಕ್ರಷರ್‌ನಲ್ಲಿ ಜಲ್ಲಿ ಹಾಗೂ ಎಂ-ಸ್ಯಾಂಡ್ ತಯಾರಿಸಿ ಮಾರಾಟ ಮಾಡುತ್ತಿದ್ದರೆಂಬ ಆರೋಪದಡಿ ಪ್ರಕರಣ ದಾಖಲಾಗಿದೆ. ನಾಲ್ಕು ಟಿಪ್ಪರ್‌ಗಳು, ಮೂರು ಹಿಟಾಚಿ ಯಂತ್ರಗಳು, ಒಂದು ಕ್ರಷರ್ ಘಟಕ ಹಾಗೂ ಸುಮಾರು 20 ಲೋಡ್ ಜಲ್ಲಿ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದೆಡೆ, ಕಾಪು ತಾಲೂಕಿನ ಸಾಂತೂರು ಗ್ರಾಮದ ಕ್ರಷರ್‌ಗೆ ಪಡುಬಿದ್ರಿ ಪೊಲೀಸರು ಸೆ.11ರಂದು ರಾತ್ರಿ ದಾಳಿ ನಡೆಸಿದ್ದಾರೆ. ಪ್ರಭಾಕರ ಶೆಟ್ಟಿ ಹಾಗೂ ಇತರರು ಸರ್ಕಾರಿ ಜಾಗದಿಂದ ಕಲ್ಲುಗಳನ್ನು ಕದ್ದು ತಂದು ಕ್ರಷರ್‌ನಲ್ಲಿ ಜಲ್ಲಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಸುಮಾರು 40 ಯುನಿಟ್ ಜಲ್ಲಿ, ಎರಡು ಲಾರಿಗಳು ಹಾಗೂ ಒಂದು ಜೆಸಿಬಿ ವಶಕ್ಕೆ ಪಡೆಯಲಾಗಿದೆ. ಮೂರು ಪ್ರಕರಣಗಳಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಸಾಗಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



