ಉಡುಪಿ: ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಘಟನೆಯನ್ನು ಖಂಡಿಸಿ ಕೆಪಿಸಿಸಿ ಪ್ರಚಾರ ಸಮಿತಿ ವತಿಯಿಂದ ಉಡುಪಿಯ ಅಜ್ಜರಕಾಡಿನ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಯಿತು.

ಸತ್ಯಾಗ್ರಹದಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಬಿಜೆಪಿಗರು ಮನುಸ್ಮೃತಿಯ ಮನಸ್ಥಿತಿಯಿಂದ ದಲಿತರ ಮೂಲಕ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಬೆಳವಣಿಗೆಗಳು ದೇಶವನ್ನು ಮತ್ತೆ ಹಿಂದುಳಿದ ಕಾಲಘಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನವಾಗಿದ್ದು, ಅಸಮಾನತೆ ಹಾಗೂ ಅಸ್ಪೃಶ್ಯತೆ ಮನುಷ್ಯರು ಸೃಷ್ಟಿಸಿದ ವ್ಯವಸ್ಥೆಗಳಾಗಿವೆ ಎಂದರು. ದಲಿತರ ಮೇಲಿನ ಅನ್ಯಾಯವನ್ನು ಬಿಜೆಪಿ ಸಮರ್ಥಿಸುತ್ತಿರುವುದು ದುರದೃಷ್ಟಕರ ಎಂದು ಆರೋಪಿಸಿದ ಸೊರಕೆ, ಅಯೋಧ್ಯೆ ರಾಮಮಂದಿರದ ಹಣದ ದುರ್ಬಳಕೆ ಆರೋಪದ ಕುರಿತು ಪ್ರಧಾನಿ ನರೇಂದ್ರ ಮೋದಿ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

ಬೈಂದೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ, ದಲಿತರನ್ನು ದಲಿತರಿಂದಲೇ ಪ್ರತ್ಯೇಕಿಸುವ ಹಾಗೂ ಒಡೆದು ಆಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದಲಿತ ನಾಯಕರನ್ನು ಪ್ರತ್ಯೇಕಿಸುವ ಪ್ರಯತ್ನವನ್ನು ಕಾಂಗ್ರೆಸ್ ಖಂಡಿಸುತ್ತದೆ. ದೇಶದ ಅಖಂಡತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ತಪ್ಪುಗಳನ್ನು ಪ್ರಶ್ನಿಸುವವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಆದರೆ ಬಿಜೆಪಿಯನ್ನು ಹೊಗಳುವವರನ್ನು ದೇಶಪ್ರೇಮಿಗಳೆಂದು ಕರೆಯಲಾಗುತ್ತಿದೆ ಎಂದು ಟೀಕಿಸಿದರು. ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸುವುದಕ್ಕಿಂತ ಇಂತಹ ಕೃತ್ಯ ನಡೆಸಿದವರ ಮನಸ್ಥಿತಿ ಬದಲಾಗಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಹರಿಪ್ರಸಾದ್ ರೈ, ಪ್ರಖ್ಯಾತ್ ಶೆಟ್ಟಿ, ಜ್ಯೋತಿ ಹೆಬ್ಬಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ಸುದರ್ಶನ್ ಮತ್ತು ಬಳಗದವರು ‘ರಘುಪತಿ ರಾಘವ’ ಹಾಗೂ ‘ವೈಷ್ಣವ ಜನತೋ’ ಭಜನೆಗಳ ಮೂಲಕ ಗಾಂಧಿ ಸ್ಮರಣೆ ನಡೆಸಿದರು.


