ಉಡುಪಿ : ಅಪಘಾತಕ್ಕೀಡಾದ ಸರಕು ಸಾಗಣೆ ಲಾರಿಯನ್ನು ಹೆದ್ದಾರಿಯಲ್ಲಿ ಮೇಲೆತ್ತುವ ಕಾರ್ಯ ನಡೆಯುತ್ತಿದ್ದ ವೇಳೆ ಮತ್ತೊಂದು ಲಾರಿ ನಿಯಂತ್ರಣ ತಪ್ಪಿ ಹೈವೆ ಪೆಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬೈಂದೂರು ಸಮೀಪ ನಡೆದಿದೆ. ಘಟನೆಯಲ್ಲಿ ನಾಲ್ಕು ಬೈಕ್ಗಳು ಜಖಂಗೊಂಡಿವೆ. ಮೃತರನ್ನು ಶಿರೂರಿನ ನಾಗೇಂದ್ರ ಮಹಾಲೆ (45) ಎಂದು ಗುರುತಿಸಲಾಗಿದೆ.

ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದ ಸರಕು ತುಂಬಿದ ಲಾರಿಯನ್ನು ಮೇಲೆತ್ತುವ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು. ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ಇದೇ ವೇಳೆ ಇಳಿಜಾರು ರಸ್ತೆಯಲ್ಲಿ ಅತಿವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೈವೆ ಪೆಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಸಮೀಪದಲ್ಲಿದ್ದ ನಾಲ್ಕು ಬೈಕ್ಗಳು ಜಖಂಗೊಂಡಿದ್ದು, ಬೈಕ್ನಲ್ಲಿದ್ದ ನಾಗೇಂದ್ರ ಮಹಾಲೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ಲಾರಿ ಹೈವೆ ಪೆಟ್ರೋಲ್ ವಾಹನಕ್ಕೆ ಡಿಕ್ಕಿಯಾಗದೇ ಮುಂದಕ್ಕೆ ನುಗ್ಗಿದ್ದರೆ ಹೆದ್ದಾರಿ ಮುಂಭಾಗದಲ್ಲಿದ್ದ ಸಾರ್ವಜನಿಕರು ಹಾಗೂ ಹೋಟೆಲ್ ಎದುರು ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿಯಾಗಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ರಬ್ಬರ್ ತುಂಬಿದ್ದ ಲಾರಿ ಕೇರಳದಿಂದ ಮಹಾರಾಷ್ಟ್ರದ ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ವೃತ್ತನಿರೀಕ್ಷಕ ಸಂತೋಷ ಕಾಯ್ಕಿಣಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



