Monday, June 22, 2026

spot_img

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಿ: ಸಿಇಒ ಪ್ರತೀಕ್ ಬಾಯಲ್

ಉಡುಪಿ : ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಇಲಾಖೆಗಳು ಹಾಗೂ ಬ್ಯಾಂಕುಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಉದ್ಯಮಿಗಳ ವಿಶ್ವಾಸವನ್ನು ಹೆಚ್ಚಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು. ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಗೋಡಂಬಿ ಸಂಸ್ಕರಣಾ ಘಟಕಗಳು, ಮೆರೈನ್ ಉತ್ಪನ್ನಗಳು ಹಾಗೂ ಸಿದ್ಧ ಆಹಾರ ಉತ್ಪಾದನಾ ಘಟಕಗಳು ಪ್ರಮುಖವಾಗಿವೆ. ಇಂತಹ ಕೈಗಾರಿಕೆಗಳಿಗೆ ಮೂಲಸೌಕರ್ಯ ಮತ್ತು ಕಾರ್ಯನಿರತ ಬಂಡವಾಳದ ಅಗತ್ಯವಿದ್ದಲ್ಲಿ ಬ್ಯಾಂಕುಗಳು ಆರ್ಥಿಕ ನೆರವು ನೀಡಬೇಕು ಎಂದು ಅವರು ಸೂಚಿಸಿದರು.

ಸಣ್ಣ ಕೈಗಾರಿಕೆಗಳಿಗೆ ಬ್ಯಾಂಕುಗಳಿಂದ ಸಮರ್ಪಕ ಸಹಕಾರ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿದ್ದು, ಬ್ಯಾಂಕಿಂಗ್ ವಲಯ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದಾಗುವ ಮಹಿಳಾ ಸಂಘಗಳಿಗೆ ಅಗತ್ಯ ಸಾಲ ಸೌಲಭ್ಯ ಮತ್ತು ಮಾರ್ಗದರ್ಶನ ಒದಗಿಸಬೇಕು ಎಂದರು. ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಿ, ವಿಮೆ ವ್ಯಾಪ್ತಿಗೆ ಹೆಚ್ಚು ರೈತರನ್ನು ಒಳಪಡಿಸಬೇಕು. ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ತ್ವರಿತವಾಗಿ ಪರಿಹರಿಸಿ ವಿಮಾ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ. ಸರ್ಕಾರಿ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಇಲಾಖೆಗಳು ಮತ್ತು ಬ್ಯಾಂಕುಗಳು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಬ್ಯಾಂಕ್‌ಗಳ ಸಾಲ-ಠೇವಣಿ ಅನುಪಾತ ಶೇ.48.99 ಇದ್ದು, ಇದು ಭಾರತೀಯ ರಿಸರ್ವ್ ಬ್ಯಾಂಕ್‌ನ ಕನಿಷ್ಠ ಶೇ.60 ಮಾರ್ಗಸೂಚಿಗಿಂತ ಕಡಿಮೆಯಾಗಿದೆ. ಆದ್ದರಿಂದ ವಸತಿ, ಶಿಕ್ಷಣ, ಸ್ವಯಂ ಉದ್ಯೋಗ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಉಪ ಮಹಾ ಪ್ರಬಂಧಕ ಮಹಾಮಾಯ ಪ್ರಸಾದ್, ಕಳೆದ ಸಾಲಿನಲ್ಲಿ ಜಿಲ್ಲೆಗೆ ರೂ15,514.08 ಕೋಟಿ ವಾರ್ಷಿಕ ಸಾಲ ಗುರಿ ನಿಗದಿಯಾಗಿದ್ದು, ರೂ17,191.28 ಕೋಟಿ ವಿತರಿಸುವ ಮೂಲಕ ಶೇ.110.81ರಷ್ಟು ಸಾಧನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕೃಷಿ, ಎಂಎಸ್‌ಎಂಇ, ಶಿಕ್ಷಣ, ವಸತಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆಯ ವಿವರಗಳನ್ನು ಮಂಡಿಸಿದ ಅವರು, ವಿವಿಧ ಸರ್ಕಾರಿ ಯೋಜನೆಗಳಡಿ ಕೋಟ್ಯಂತರ ರೂಪಾಯಿ ಸಾಲ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಒದಗಿಸಲಾಗಿದೆ ಎಂದರು.

ಸಭೆಯಲ್ಲಿ ಆರ್‌ಬಿಐ ಎಜಿಎಂ ನಿಶಾ ಠಾಕೂರ್, ನಬಾರ್ಡ್ ಡಿಡಿಎಂ ಸಂಗೀತಾ ಕಾರ್ಥಾ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹರೀಶ್ ಜಿ., ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles