ಉಡುಪಿ: ರೈಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಕೇರಳ ಮೂಲದ ಯುವಕನನ್ನು ರಕ್ಷಿಸಿದ ಬಳಿಕ, ಅವನ ವಾರಸುದಾರರನ್ನು ಪತ್ತೆಹಚ್ಚಿ ಹಸ್ತಾಂತರಿಸುವಲ್ಲಿ ಉಡುಪಿಯ ಕೇರಳ ಕಲ್ಚರಲ್ ಸೊಸಿಯಲ್ ಸೆಂಟರ್ ಹಾಗೂ ರೈಲ್ವೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಯಾಣಚೀಟಿ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಚಲಿಸುತ್ತಿದ್ದ ರೈಲು ಬಾಗಿಲಿನಿಂದ ಜಿಗಿಯಲು ಯತ್ನಿಸಿದಾಗ, ಕರ್ತವ್ಯದಲ್ಲಿದ್ದ ಪ್ರಯಾಣಚೀಟಿ ತಪಾಸಣಾಧಿಕಾರಿ ಬಾಬು ಅವರು ಸಮಯಪ್ರಜ್ಞೆಯಿಂದ ರಕ್ಷಿಸಿದ್ದರು.

ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲು ಇನ್ನಂಜೆ ರೈಲು ನಿಲ್ದಾಣದ ಸಮೀಪ ಬಂದಾಗ ಈ ಘಟನೆ ನಡೆದಿದೆ. ಬಳಿಕ ಯುವಕನನ್ನು ಇಂದ್ರಾಳಿ ರೈಲು ನಿಲ್ದಾಣದ ಆರ್‌ಪಿಎಫ್ ಕಚೇರಿಗೆ ಒಪ್ಪಿಸಲಾಗಿತ್ತು. ಯುವಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂಬ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ನಂತರ ಒಳಕಾಡು ಅವರು ಕೇರಳ ಕಲ್ಚರಲ್ ಸೊಸಿಯಲ್ ಸೆಂಟರ್‌ನ ಸಹಾಯವನ್ನು ಪಡೆದುಕೊಂಡರು. ಸಂಸ್ಥೆಯ ಅಧ್ಯಕ್ಷ ಸುಗುಣ ಕುಮಾರ್, ಕಾರ್ಯದರ್ಶಿ ಬೀನೆಶ್ ಹಾಗೂ ಸದಸ್ಯರು ಯುವಕನ ವಿವರಗಳನ್ನು ಕೇರಳದ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಅವನ ಸಂಬಂಧಿಕರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಆ ಬಳಿಕ ಯುವಕನನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.



