ಉಡುಪಿ : ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾಂಗಳ ಕಟ್ಟಿಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಮಂಗಳೂರುದಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಕಾರು, ಪಾಂಗಳ ಕಟ್ಟಿಕೆರೆ ಸಮೀಪ ಲಾರಿಯೊಂದಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯ ಮಾಹಿತಿ ತಿಳಿದು ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.



