ಉಡುಪಿ: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡನೆ ಮಸೂದೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಿಂದ ಕಾಲ್ನಡಿಗೆ ಮೂಲಕ ಬ್ರಹ್ಮಗಿರಿ ಸರ್ಕಲ್‌ಗೆ ಆಗಮಿಸಿದ ಕಾರ್ಯಕರ್ತರು, ಅಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಗುರಾಣಿಯಾಗಿ ಬಳಸಿಕೊಂಡು ಕ್ಷೇತ್ರ ಮರುವಿಂಗಡನೆಗೆ ಮುಂದಾಗಿದೆ ಎಂದು ಆರೋಪಿಸಿದರು. 2023ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿದರೂ, ಅದನ್ನು ಇನ್ನೂ ಸಮರ್ಪಕವಾಗಿ ಜಾರಿಗೆ ತರಲಾಗಿಲ್ಲ. ಈಗ ಅದನ್ನೇ ನೆಪವನ್ನಾಗಿ ಮಾಡಿಕೊಂಡು ಅವೈಜ್ಞಾನಿಕ ರೀತಿಯಲ್ಲಿ ಕ್ಷೇತ್ರ ಮರುವಿಂಗಡನೆಗೆ ಮುಂದಾಗಿರುವುದನ್ನು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು ಹೇಳಿದರು.

ಮಹಿಳಾ ಪರತೆಯ ಕುರಿತು ಮಾತನಾಡುವ ಕೇಂದ್ರ ಸರ್ಕಾರ, ದೇಶಕ್ಕೆ ಮೊದಲ ಮಹಿಳಾ ಪ್ರಧಾನಿಯನ್ನು ನೀಡಿದ ಕಾಂಗ್ರೆಸ್ ಪಕ್ಷದ ಪಾತ್ರವನ್ನು ಮರೆತಿದೆ. ಮಹಿಳೆಯರಿಗೆ ಹೆಚ್ಚಿನ ಪ್ರತಿನಿಧ್ಯ ನೀಡಿದ ಹೆಗ್ಗಳಿಗೆ ಕಾಂಗ್ರೆಸ್ ಪಕ್ಷಕ್ಕಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಪ್ರಸಾದ್ ರಾಜ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಜ್ಯೋತಿ ಹೆಬ್ಬಾರ್, ಕಿಶನ್ ಹೆಗ್ಡೆ, ಕೊಳ್ಕೆಬೈಲು ಹರಿಪ್ರಸಾದ್ ರೈ, ಹೆಬ್ರಿ ಮಂಜುನಾಥ್ ಪೂಜಾರಿ, ಸರ್ಫುದ್ದೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



