Wednesday, June 10, 2026

spot_img

ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗಬಾರದು: ಕೆ. ಜಯಪ್ರಕಾಶ್ ಹೆಗ್ಡೆ

ಉಡುಪಿ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ  ಕರೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದ್ದು, ಮತದಾರರ ಪಟ್ಟಿಯನ್ನು ನಿಖರಗೊಳಿಸುವ ಉದ್ದೇಶದಿಂದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪ್ರಕ್ರಿಯೆಯ ಕುರಿತು ಅರಿವಿನ ಕೊರತೆ ಅಥವಾ ನಿರ್ಲಕ್ಷ್ಯದಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈತಪ್ಪುವುದು, ಹೊಸ ಮತದಾರರ ಸೇರ್ಪಡೆ ವಿಳಂಬವಾಗುವುದು, ಅಗತ್ಯ ತಿದ್ದುಪಡಿಗಳು ಆಗದೆ ಉಳಿಯುವುದು ಹಾಗೂ ಅನುಮಾನಾಸ್ಪದ ನೋಂದಣಿಗಳ ವಿರುದ್ಧ ಸಮಯಕ್ಕೆ ಆಕ್ಷೇಪಣೆ ಸಲ್ಲಿಕೆಯಾಗದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಏಜೆಂಟ್‌ಗಳಿಗೆ (ಬಿಎಲ್‌ಎ) ಸಮಗ್ರ ತರಬೇತಿ ನೀಡಿ, ಫಾರ್ಮ್-6, ಫಾರ್ಮ್-7 ಮತ್ತು ಫಾರ್ಮ್-8 ಬಳಕೆ, ಕರಡು ಮತದಾರರ ಪಟ್ಟಿಯ ಪರಿಶೀಲನೆ, ಆಕ್ಷೇಪಣೆ ಸಲ್ಲಿಸುವ ವಿಧಾನ ಹಾಗೂ ಕಾಲಮಿತಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಬೂತ್ ಮಟ್ಟದಲ್ಲಿ ಮನೆಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುವ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಜೂನ್ 30ರಿಂದ ಜುಲೈ 29ರವರೆಗೆ ಮತದಾರರು ತಮ್ಮ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಸಂಪರ್ಕಿಸಿ ಎನ್ಯೂಮರೇಷನ್ ಫಾರ್ಮ್ (ಇಎಫ್) ಅನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ಸಲ್ಲಿಸಬೇಕು. ಅಗತ್ಯವಿದ್ದಲ್ಲಿ 2002ರ ಮತದಾರರ ಪಟ್ಟಿಯಲ್ಲಿನ ವಿವರಗಳು ಅಥವಾ ಪೋಷಕರು, ಅಜ್ಜ-ಅಜ್ಜಿಯರ ಮತದಾರರ ಮಾಹಿತಿಯನ್ನು ಒದಗಿಸಬೇಕಾಗಬಹುದು. ಆದ್ದರಿಂದ ಚುನಾವಣಾ ಆಯೋಗ ಸೂಚಿಸಿರುವ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಟ್ಟುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಮತದಾರರು ತಮ್ಮ ಹೆಸರು, ವಿಳಾಸ, ವಯಸ್ಸು, ಫೋಟೋ ಸೇರಿದಂತೆ ಎಲ್ಲ ವಿವರಗಳನ್ನು ಪರಿಶೀಲಿಸಿ, ಯಾವುದೇ ತಪ್ಪು ಕಂಡುಬಂದರೆ ತಕ್ಷಣ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಬೂತ್ ಮಟ್ಟದ ಏಜೆಂಟ್‌ಗಳು ಹೊಸ ಮತದಾರರ ಸೇರ್ಪಡೆ, ಮೃತರು ಹಾಗೂ ಸ್ಥಳಾಂತರಗೊಂಡವರ ಮಾಹಿತಿಯ ನವೀಕರಣ ಮತ್ತು ಅನುಮಾನಾಸ್ಪದ ನೋಂದಣಿಗಳ ವಿರುದ್ಧ ಕಾನೂನುಬದ್ಧ ಆಕ್ಷೇಪಣೆ ಸಲ್ಲಿಸುವ ಕಾರ್ಯದಲ್ಲಿ ಸಕ್ರಿಯರಾಗಬೇಕು ಎಂದು ಅವರು ತಿಳಿಸಿದ್ದಾರೆ.

ಮತದಾರರ ಪಟ್ಟಿಯ ರಕ್ಷಣೆ ಚುನಾವಣಾ ದಿನದ ಕೆಲಸವಲ್ಲ; ಅದು ನಿರಂತರ ಸಂಘಟನಾ ಕಾರ್ಯವಾಗಿದೆ. ಬಲವಾದ ಬಿಎಲ್‌ಎ ವ್ಯವಸ್ಥೆ, ಜಾಗೃತ ಮತದಾರರು ಮತ್ತು ಸಕಾಲಿಕ ಪರಿಶೀಲನೆಯ ಮೂಲಕ ಮಾತ್ರ ಮತದಾರರ ಪಟ್ಟಿಯ ನಿಖರತೆಯನ್ನು ಕಾಪಾಡಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತ, ಬಿಎಲ್‌ಎ ಹಾಗೂ ಮತದಾರರು ಎಸ್‌ಐಆರ್ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles