Sunday, October 4, 2026

spot_img

ಯಕ್ಷಗಾನ ಕಲಾರಂಗದಿಂದ 104ನೇ ಮನೆ ಹಸ್ತಾಂತರ

ಉಡುಪಿ:  ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದರ ಜತೆಗೆ ಅವರ ಕುಟುಂಬಗಳಿಗೆ ನೆಮ್ಮದಿಯ ನೆಲೆ ಕಲ್ಪಿಸುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿರುವ ಯಕ್ಷಗಾನ ಕಲಾರಂಗದ ವತಿಯಿಂದ ನಿರ್ಮಿಸಲಾದ 104ನೇ ಮನೆಯನ್ನು ಹಸ್ತಾಂತರಿಸಲಾಯಿತು.

ಕಾಪು ತಾಲೂಕಿನ ಮುದರಂಗಡಿಯಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿನಯ್ ಆಚಾರ್ಯ, ಲತಾ ಮತ್ತು ಗೋಪಾಲ ಆಚಾರ್ಯ ದಂಪತಿಯ ಪುತ್ರನಿಗಾಗಿ ನಿರ್ಮಿಸಲಾದ ‘ಶಾಂತಿ ನಿಲಯ’ವನ್ನು ಅ.3ರಂದು ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕ ಹಾಗೂ ಜಪಾನ್ ನಿವಾಸಿ ಅಲೆವೂರು ಹರಿಕೃಷ್ಣ ಭಟ್ ಮತ್ತು ಅವರ ಪತ್ನಿ ಯಸುಕೊ ಸತೊ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸುಮಾರು ರೂ.7 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಮನೆಯನ್ನು ಹರಿಕೃಷ್ಣ ಭಟ್ ದಂಪತಿಯ ಪ್ರಾಯೋಜಕತ್ವದಲ್ಲಿ ಪೂರ್ಣಗೊಳಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹರಿಕೃಷ್ಣ ಭಟ್, ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಸ್ಮರಿಸಿಕೊಂಡು, ತಾವು ಕೂಡ ಇತರರ ನೆರವು ಪಡೆದು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಅದೇ ರೀತಿಯಲ್ಲಿ ಅಗತ್ಯವಿರುವವರಿಗೆ ನೆರವಾಗುವುದು ತಮ್ಮ ಕರ್ತವ್ಯವೆಂಬ ಭಾವನೆಯಿಂದ ಈ ಕಾರ್ಯಕ್ಕೆ ಕೈಜೋಡಿಸಿರುವುದಾಗಿ ಹೇಳಿದರು. ವಿನಯ್ ಉತ್ತಮ ಅಂಕಗಳನ್ನು ಗಳಿಸಿ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಭವಿಷ್ಯದಲ್ಲಿ ಜಪಾನ್‌ನಲ್ಲಿ ಉದ್ಯೋಗಾವಕಾಶ ಪಡೆಯಲಿ ಎಂದು ಹಾರೈಸಿದರು. ಯಸುಕೊ ಸತೊ ಅವರು ಕನ್ನಡದಲ್ಲಿಯೇ ವಿದ್ಯಾರ್ಥಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲಾರಂಗದ ಯಾವುದೇ ಕಾರ್ಯಕ್ರಮವನ್ನೂ ತಾವು ತಪ್ಪಿಸಿಕೊಳ್ಳುವುದಿಲ್ಲ. ಸಂಸ್ಥೆಯ ಪ್ರತಿಯೊಂದು ಕಾರ್ಯದಲ್ಲೂ ಸಮಾಜಕ್ಕೆ ಒಂದು ಉತ್ತಮ ಸಂದೇಶವಿರುತ್ತದೆ. ಬಡ ವಿದ್ಯಾರ್ಥಿಗಳಿಗಾಗಿ ಸಂಸ್ಥೆ ನಡೆಸುತ್ತಿರುವ ಸೇವೆ ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯರಾದ ಎ. ರಘುಪತಿ ಭಟ್ ಮಾತನಾಡಿ, ಯಕ್ಷಗಾನ ಕಲಾರಂಗದ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಅನೇಕರಿಗೆ ಪರಿಚಯಿಸಿರುವುದಾಗಿ ತಿಳಿಸಿ, ತಮ್ಮ ಸಹೋದರ ಹರಿಕೃಷ್ಣ ಭಟ್ ಕೈಗೊಂಡಿರುವ ಈ ಸೇವಾ ಕಾರ್ಯ ತಮಗೆ ಅಪಾರ ಸಂತೋಷ ತಂದಿದೆ ಎಂದರು.

ಗೋವಾ ರಾಜ್ಯ ಉನ್ನತ ಶಿಕ್ಷಣ ಸಮಿತಿ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರಿಂದ ಅವರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ತಮ್ಮ ವಿದ್ಯಾಗುರು ಡಾ. ಹರಿಕೃಷ್ಣ ಭಟ್ ಕರಾವಳಿಯ ಯುವಕರಿಗೆ ಜಪಾನ್‌ನಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಹುಟ್ಟೂರಿನ ಮೇಲಿನ ಪ್ರೀತಿಯೇ ಇಂತಹ ಸತ್ಕಾರ್ಯಗಳಿಗೆ ಅವರನ್ನು ಪ್ರೇರೇಪಿಸುತ್ತಿದೆ ಎಂದರು. ನಿಟ್ಟೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಘವೇಂದ್ರ ಪೈ ಅವರು ಡಾ. ಹರಿಕೃಷ್ಣ ಭಟ್ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸಾಧನೆಗಳನ್ನು ಪರಿಚಯಿಸಿದರು. ಮನೆಯ ನಿರ್ಮಾಣ ಕಾರ್ಯ ನಿರ್ವಹಿಸಿದ ಇಂಜಿನಿಯರ್ ಮುಬಾರಕ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜಾ ರಾವ್–ವತ್ಸಲಾ ದಂಪತಿ, ಶೋಭಾ ಗೋಪಾಲ್ ಮುಗೇರಾಯ, ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರಾದ ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯಕುಮಾರ್ ಮುದ್ರಾಡಿ, ಯು. ಅನಂತರಾಜ ಉಪಾಧ್ಯ, ಭುವನಪ್ರಸಾದ ಹೆಗ್ಡೆ, ಡಾ. ರಾಜೇಶ್ ನಾವುಡ, ಮರ್ಣೆ ಉಮೇಶ ಭಟ್, ಎಲ್ಲೂರು ಗಣೇಶ ರಾವ್, ಆರ್. ವಸಂತ, ವಿಶ್ವನಾಥ, ವಿನೀತ್, ನಿವೃತ್ತ ಪ್ರಾಂಶುಪಾಲ ಶ್ರೀನಿವಾಸ ಪ್ರಭು, ಅದಮಾರು ಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ ಆಚಾರ್, ಉದ್ಯಮಿ ವೀರೇಂದ್ರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles