ಉಡುಪಿ: ವ್ಯಕ್ತಿಯೊಬ್ಬರು ನಿಗೂಢವಾಗಿ ನಾಪತ್ತೆಯಾದ ಬೆನ್ನಲ್ಲೇ ಪಕ್ಕದ ಮನೆಯ ಬಾವಿಯಲ್ಲಿ ಅವರ ಮೃತದೇಹ ಪತ್ತೆಯಾದ ಘಟನೆ ಅಲ್ಬಾಡಿ ಗ್ರಾಮದ ಹೊಟ್ಕೇರ್ ಮಕ್ಕಿಯಲ್ಲಿ ನಡೆದಿದೆ. ಮೃತರನ್ನು ಸುದರ್ಶನ ಪೂಜಾರಿ (34) ಎಂದು ಗುರುತಿಸಲಾಗಿದೆ. ಸುಮಾರು 12 ವರ್ಷಗಳ ಹಿಂದೆ ಸಂಗೀತಾ (32) ಅವರನ್ನು ವಿವಾಹವಾಗಿದ್ದ ಸುದರ್ಶನ, ದಂಪತಿಗಳ ನಡುವೆ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಬಳಿಕ ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಮತ್ತೆ ಉತ್ತಮ ಸಂಬಂಧ ಬೆಳೆದು, ದೂರವಾಣಿ ಮೂಲಕ ಮಾತನಾಡುತ್ತಿದ್ದರು ಎನ್ನಲಾಗಿದೆ.

ನ. 3ರಂದು ರಾತ್ರಿ 11.30ರ ಸುಮಾರಿಗೆ ಸುದರ್ಶನ ಅವರು ತನ್ನ ತಾಯಿಯ ಮನೆಯಲ್ಲಿದ್ದುಕೊಂಡು ಪತ್ನಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ, ಸ್ನೇಹಿತನ ಬೈಕ್ ಕೆಟ್ಟುಹೋಗಿದ್ದು ಅದನ್ನು ನೋಡಿಕೊಂಡು ಬರುವುದಾಗಿ ಹೇಳಿ ತೆರಳಿದ್ದರು. ಆದರೆ ಮನೆಗೆ ಮರಳಿರಲಿಲ್ಲ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.

ನ. 4ರಂದು ಪತ್ನಿ ಹಾಗೂ ಸ್ಥಳೀಯರು ಸೇರಿ ಹುಡುಕಾಟ ನಡೆಸಿದಾಗ, ಪಕ್ಕದ ಮನೆಯ ಸುರೇಶ್ ಪೂಜಾರಿ ಅವರಿಗೆ ಸೇರಿದ ಬಾವಿಯ ಸಮೀಪ ಸುದರ್ಶನ ಅವರ ಚಪ್ಪಲಿ ಪತ್ತೆಯಾಗಿದೆ. ಅನುಮಾನದ ಮೇರೆಗೆ ಬಾವಿಯಲ್ಲಿ ಪರಿಶೀಲಿಸಿದಾಗ ಸುದರ್ಶನ ಅವರ ಮೃತದೇಹ ಪತ್ತೆಯಾಗಿದೆ. ಸುದರ್ಶನ ಅವರ ಸಾವಿನ ಬಗ್ಗೆ ಅನುಮಾನವಿದ್ದು, ಸೂಕ್ತ ತನಿಖೆ ನಡೆಸುವಂತೆ ಪತ್ನಿ ಸಂಗೀತಾ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.


