Thursday, November 5, 2026

spot_img

ಬಾಳೆಕುದ್ರು ಮಠದ ಆರು ಪುರಾತನ ವಿಗ್ರಹಗಳ ಮಾರಾಟ ಪ್ರಕರಣ: ಎಫ್‌ಐಆರ್ ದಾಖಲಾಗುತ್ತಿದ್ದಂತೆ ಮಠಕ್ಕೆ ಬೀಗ ಜಡಿದು ಸ್ವಾಮೀಜಿ ಪರಾರಿ !?

ಉಡುಪಿ: ಸಾವಿರಾರು ವರ್ಷಗಳ ಧಾರ್ಮಿಕ ಪರಂಪರೆ ಹೊಂದಿರುವ ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠದ ಆರು ಪುರಾತನ ವಿಗ್ರಹಗಳ ಮಾರಾಟ ಪ್ರಕರಣ ಇದೀಗ ಭಾರೀ ಸಂಚಲನ ಮೂಡಿಸಿದೆ. ಮಠದ ಶ್ರೀ ವಾಸುದೇವ ಸದಾಶಿವಶ್ರಮ ಸ್ವಾಮೀಜಿ ವಿರುದ್ಧ ವಿಗ್ರಹಗಳ ಮಾರಾಟದ ಆರೋಪ ಕೇಳಿಬಂದಿದ್ದು, ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸ್ವಾಮೀಜಿ ಮಠಕ್ಕೆ ಬೀಗ ಜಡಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಭಾಗವತ ಸಂಪ್ರದಾಯಕ್ಕೆ ಸೇರಿದ ಬಾಳೆಕುದ್ರು ಮಠದಲ್ಲಿ ಶತಮಾನಗಳ ಇತಿಹಾಸ ಹೊಂದಿರುವ ವಿಗ್ರಹಗಳು ಪೂಜಿಸಲ್ಪಡುತ್ತಿದ್ದವು. ನರಸಿಂಹದೇವರು, ಗಣಪತಿ, ಮಹಿಷಮರ್ದಿನಿ ಸೇರಿದಂತೆ ಆರು ವಿಗ್ರಹಗಳು ನಾಪತ್ತೆಯಾಗಿರುವುದು ಪ್ರಕರಣದ ಮೂಲವಾಗಿದೆ. ಈ ಕುರಿತು ಪ್ರಶ್ನಿಸಿದಾಗ, ಹಳೆಯ ವಿಗ್ರಹಗಳನ್ನು ವಿಸರ್ಜಿಸಿ ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಮಠದ ವತಿಯಿಂದ ತಿಳಿಸಲಾಗಿತ್ತು. ಆದರೆ ಇದೀಗ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಿರುವ ಆರೋಪ ಬೆಳಕಿಗೆ ಬಂದಿರುವುದು ಮಠದ ಭಕ್ತರು ಹಾಗೂ ಶಿಷ್ಯ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದ ಫೋಟೋಗಳಿಂದ ಪ್ರಕರಣ ಬಯಲು

ಮಠದ ಶಿಷ್ಯ ಜಗದೀಶ್ ಐತಾಳ್ ಅವರು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಲಾಗಿತ್ತು. ನಾಪತ್ತೆಯಾಗಿದ್ದ ಪುರಾತನ ವಿಗ್ರಹಗಳ ಫೋಟೋಗಳು ಸಾಮಾಜಿಕ ಜಾಲತಾಣದ ಮೂಲಕ ವೆಬ್‌ಸೈಟ್ ಒಂದರಲ್ಲಿ ಮಾರಾಟದ ಉದ್ದೇಶದಿಂದ ಪ್ರದರ್ಶಿಸಲ್ಪಟ್ಟಿರುವ ಮಾಹಿತಿ ಲಭಿಸಿತ್ತು.

ಈ ಸುಳಿವಿನ ಆಧಾರದಲ್ಲಿ ಬೆಂಗಳೂರು ಪೊಲೀಸರು ತನಿಖೆ ನಡೆಸಿದಾಗ, ಬಾಳೆಕುದ್ರು ಮಠದ ವಿಗ್ರಹಗಳನ್ನು ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಬೆಂಗಳೂರಿನ ಪ್ರಸಿದ್ಧ ಐಡಲ್ಸ್ ಸಂಸ್ಥೆಗೆ ವಿಗ್ರಹಗಳನ್ನು ಮಾರಾಟ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಸಂಸ್ಥೆಯ ಮಾಲಕ ನಾಗೇಂದ್ರ ಪ್ರಸಾದ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಾಹಿತಿ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಅನಿಲ್ ಕುಮಾರ್, ಜಯಲಕ್ಷ್ಮಿ, ಶ್ರೇಯಸ್ ಸೇರಿದಂತೆ ಇತರರ ಹೆಸರುಗಳೂ ಕೇಳಿಬಂದಿವೆ. ಮಠದ ಸ್ವಾಮೀಜಿ ಹಾಗೂ ಸಿಬ್ಬಂದಿಗಳ ವಿರುದ್ಧ ಶಿಷ್ಯ ವರ್ಗ ಆರೋಪ ಮಾಡಿದ್ದು, ತನಿಖೆ ಮುಂದುವರಿದಿದೆ.

ಶಿಷ್ಯರೊಂದಿಗೆ ಸಂಘರ್ಷ; ಇದೀಗ ವಿಗ್ರಹ ಮಾರಾಟದ ಆರೋಪ

ಬಾಳೆಕುದ್ರು ಮಠದ ಸ್ವಾಮೀಜಿ ಮತ್ತು ಶಿಷ್ಯ ಸಮುದಾಯದ ನಡುವೆ ಹಲವು ವರ್ಷಗಳಿಂದ ಸಂಘರ್ಷ ನಡೆಯುತ್ತಿತ್ತು ಎನ್ನಲಾಗಿದೆ. ಕಳೆದ ಒಂದೆರಡು ತಿಂಗಳಿನಿಂದ ಈ ಸಂಘರ್ಷ ತಾರಕಕ್ಕೇರಿತ್ತು. ಶೃಂಗೇರಿ ಶ್ರೀಗಳ ಕುರಿತು ಬಾಳೆಕುದ್ರು ಸ್ವಾಮೀಜಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪವೂ ಶಿಷ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ನಡುವೆ ಮಠದ ಪುರಾತನ ವಿಗ್ರಹಗಳು ನಾಪತ್ತೆಯಾಗಿರುವ ವಿಚಾರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮಠದ ಸಾವಿರಾರು ವರ್ಷಗಳ ಪರಂಪರೆಗೆ ಸಾಕ್ಷಿಯಾಗಿದ್ದ ವಿಗ್ರಹಗಳ ಮಾರಾಟದ ಆರೋಪ ಇದೀಗ ಭಕ್ತ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸ್ವಾಮೀಜಿ ಮಠದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧದ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪುರಾತನ ವಿಗ್ರಹಗಳ ಮಾರಾಟದ ಹಿಂದೆ ಇನ್ನಷ್ಟು ಮಂದಿಯ ಕೈವಾಡವಿದೆಯೇ ಎಂಬುದನ್ನು ತನಿಖೆಯಿಂದ ತಿಳಿಯಬೇಕಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles