ಉಡುಪಿ : ಅಬಕಾರಿ ನಿಯಮಗಳ ಪ್ರಕಾರ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಅಥವಾ ಪೂರೈಕೆ ಮಾಡುವ ಬಾರ್ ಹಾಗೂ ಪಬ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಎಚ್ಚರಿಕೆ ನೀಡಿದ್ದಾರೆ. ಮಣಿಪಾಲ ಪ್ರದೇಶದಲ್ಲಿ ಅಪ್ರಾಪ್ತರಿಗೆ ಮದ್ಯ ಪೂರೈಕೆ ಮಾಡಲಾಗುತ್ತಿದೆ ಹಾಗೂ ಬಾರ್–ಪಬ್ಗಳಲ್ಲಿ ನಿಯಮ ಉಲ್ಲಂಘನೆ ನಡೆಯುತ್ತಿರುವ ಕುರಿತು ದೊರೆತ ಮಾಹಿತಿಯ ಆಧಾರದ ಮೇಲೆ ಪೊಲೀಸರು ವಿಶೇಷ ತಂಡ ರಚಿಸಿ ವಿವಿಧ ಬಾರ್ ಮತ್ತು ಪಬ್ಗಳ ಮೇಲೆ ದಿಢೀರ್ ದಾಳಿ ನಡೆಸಿದರು.

ತಪಾಸಣೆ ವೇಳೆ ನಿಯಮ ಉಲ್ಲಂಘನೆ ಸಂಬಂಧ ಒಟ್ಟು ಆರು ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿ ಸಂದರ್ಭದಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ 64 ಯುವಕರು, 23 ಯುವತಿಯರು ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಓರ್ವ ಬಾಲಕ ಪತ್ತೆಯಾಗಿರುವುದಾಗಿ ಎಸ್ಪಿ ತಿಳಿಸಿದ್ದಾರೆ. ಅಪ್ರಾಪ್ತರಿಗೆ ಮದ್ಯ ಪೂರೈಕೆ ಮಾಡುವುದು ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಮರುಕಳಿಸಿದರೆ ಸಂಬಂಧಿತ ಬಾರ್, ಪಬ್ಗಳ ಮಾಲೀಕರು, ನಿರ್ವಹಣಾಧಿಕಾರಿಗಳು ಹಾಗೂ ಹೊಣೆಗಾರರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಾದ್ಯಂತ ಮುಂದಿನ ದಿನಗಳಲ್ಲಿಯೂ ಬಾರ್, ಪಬ್ ಹಾಗೂ ಮದ್ಯ ಮಾರಾಟ ಕೇಂದ್ರಗಳ ಮೇಲೆ ವಿಶೇಷ ತಪಾಸಣೆ ಮತ್ತು ದಾಳಿಗಳನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.


