ಉಡುಪಿ : ಬಸ್‌ಗಾಗಿ ಕಾಯುತ್ತಾ ರಸ್ತೆ ಬದಿಯ ಸಿಮೆಂಟ್ ಬೆಂಚ್ ಮೇಲೆ ಕುಳಿತಿದ್ದ ಮಹಿಳೆಯೊಬ್ಬರಿಗೆ ನಿಯಂತ್ರಣ ತಪ್ಪಿದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ದುರ್ಘಟನೆ ಶಂಕರನಾರಾಯಣದಲ್ಲಿ ನಡೆದಿದೆ. ಮೃತರನ್ನು ತಾರೇಮರದ ಜೆಡ್ಡು ನಿವಾಸಿ ಮಂಜುಳಾ ಪೂಜಾರ್ತಿ (50) ಎಂದು ಗುರುತಿಸಲಾಗಿದೆ.

ಮಂಜುಳಾ ಅವರು ಮೇ 23ರಂದು ಉಳ್ಳೂರಿನ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮುಗಿಸಿಕೊಂಡು, ದೈವದ ಮನೆಯ ಪೂಜೆಯ ಪ್ರಯುಕ್ತ ತಮ್ಮ ಪಾಲಿನ ಹಣ ನೀಡಲು ಅಣ್ಣ ರಘುರಾಮ ಪೂಜಾರಿ ಅವರ ಮನೆಗೆ ಬಂದಿದ್ದರು. ಬಳಿಕ ಮನೆಗೆ ಹಿಂತಿರುಗಲು ಬಸ್‌ಗಾಗಿ ಕಾಯುತ್ತಾ ರಸ್ತೆ ಬದಿಯ ಸಿಮೆಂಟ್ ಬೆಂಚ್ ಮೇಲೆ ಕುಳಿತಿದ್ದರು ಎನ್ನಲಾಗಿದೆ. ಈ ವೇಳೆ ಸಂಜೆ ಸುಮಾರು 4 ಗಂಟೆಗೆ ಅಂಪಾರು ಕಡೆಯಿಂದ ಶಂಕರನಾರಾಯಣ ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬಲಭಾಗಕ್ಕೆ ನುಗ್ಗಿ ಮಂಜುಳಾ ಅವರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಮಂಜುಳಾ ಅವರ ಎಡಕಾಲು ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಅಂಬ್ಯುಲೆನ್ಸ್ ಮೂಲಕ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಅವರು ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪಘಾತ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



