ಉಡುಪಿ : ಮನೆಯವರಿಗೆ ಬೀಗ ಹಾಕಿ ಬೆಂಗಳೂರಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಹಾಗೂ ನಗದನ್ನು ಕಳವುಗೈದ ಘಟನೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಪರ್ಕಳ ವೋರ್ವಾಡಿ ಕೋರ್ಟ್ನಲ್ಲಿ ನಡೆದಿದೆ.

ಪರ್ಕಳದ 7-143N ವಿಳಾಸದ ನಿವಾಸಿ ಎಚ್. ಜಗದೀಶ್ ನಾಯಕ್ ಎಂಬವರು ನ.18ರಂದು ಮನೆಗೆ ಬೀಗ ಹಾಕಿ ಪತ್ನಿಯ ತವರು ಮನೆಯಾದ ಬೆಂಗಳೂರಿಗೆ ತೆರಳಿದ್ದರು. ನ.22ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಗೆ ವಾಪಸಾದಾಗ ಮನೆಯ ಮುಖ್ಯ ಬಾಗಿಲು ತೆರೆದಿರುವುದು ಕಂಡುಬಂದಿದೆ.

ಮನೆಯ ಒಳಗೆ ಪರಿಶೀಲಿಸಿದಾಗ ಬೆಡ್ರೂಮ್ನಲ್ಲಿಟ್ಟಿದ್ದ ಎರಡು ಜೊತೆ ಚಿನ್ನದ ಕಿವಿಯೋಲೆಗಳು (6 ಗ್ರಾಂ), ಎರಡು ಚಿನ್ನದ ಬಳೆಗಳು (24 ಗ್ರಾಂ), ಮಹಾಲಸ ದೇವರ ಚಿತ್ರವಿರುವ ಚಿನ್ನದ ಸರ (24 ಗ್ರಾಂ), 150 ಗ್ರಾಂ ತೂಕದ ಬೆಳ್ಳಿಯ ತಂಬಿಗೆ ಹಾಗೂ 10 ಸಾವಿರ ರೂ. ನಗದನ್ನು ಕಳ್ಳರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 4.57 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಜಗದೀಶ್ ನಾಯಕ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


