ಉಡುಪಿ : ಗುಜ್ಜಾಡಿ ಗ್ರಾಮದ ನಾಯಕವಾಡಿ–ಸಂಗಮೇಶ್ವರ ರಸ್ತೆಯ ಬಳಿ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ನ.20ರಂದು ರಾತ್ರಿ ನಡೆದಿದೆ.

ಹಲ್ಲೆಗೊಳಗಾದವರನ್ನು ಗುಜ್ಜಾಡಿ ಗ್ರಾಮದ ಉದಯ (35) ಎಂದು ಗುರುತಿಸಲಾಗಿದೆ. ಇವರು ರಾತ್ರಿ ಸುಮಾರು 8.30ರ ವೇಳೆಗೆ ಅಂಗಡಿಯಿಂದ ಗುಟ್ಕಾ ತರಲು ತೆರಳುತ್ತಿದ್ದಾಗ, ರವಿ ಮತ್ತು ಸುರೇಶ್ ಎಂಬವರು ಏಕಾಏಕಿ ಮನೆಯ ಕಡೆಯಿಂದ ರಸ್ತೆಗೆ ಓಡಿ ಬಂದು, ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಕಬ್ಬಿಣದ ರಾಡ್‌ನಿಂದ ತಲೆಗೆ ಹಾಗೂ ಕೈಕಾಲುಗಳಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ಉದಯ ಅವರ ಬಲಗಾಲಿನ ಮೊಣಕಾಲಿನ ಕೆಳಭಾಗದಲ್ಲಿ ರಕ್ತಗಾಯವಾಗಿದ್ದು, ಎಡಕೈಗೂ ನೋವುಂಟಾಗಿದೆ. ಗಾಯಾಳುವನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ, ಆರೋಪಿಗಳು ಉದಯ ಅವರ ಮನೆಯ ಬಳಿ ಪದೇಪದೇ ಬಂದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


