ಕಾರ್ಕಳ: ಕಾರ್ಕಳದ ಹೆಮ್ಮೆಯ ಯೋಜನೆಯಾಗಿರುವ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಅಡ್ಡಿಪಡಿಸುತ್ತಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತೀವ್ರ ವಾಗ್ದಾಳಿ ನಡೆಸಿದರು. ರಶುರಾಮ ಥೀಮ್ ಪಾರ್ಕ್ ಜನಾಗ್ರಹ ಸಮಿತಿಯ ನೇತೃತ್ವದಲ್ಲಿ ಕಾರ್ಕಳದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಚಿವ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ಅವರ ಕನಸಿನ ಯೋಜನೆಯಾದ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡುತ್ತಿಲ್ಲ. ರಾಜಕೀಯ ದ್ವೇಷದ ಕಾರಣದಿಂದ ಯೋಜನೆಯ ಅಭಿವೃದ್ಧಿಗೆ ತಡೆಯೊಡ್ಡಲಾಗುತ್ತಿದೆ ಎಂದು ಆರೋಪಿಸಿದರು. ಪರಶುರಾಮರ ಕುರಿತು ಮಾತನಾಡಿದ ಕಾರಣಕ್ಕಾಗಿಯೇ ಉದಯ್ ಕುಮಾರ್ ಶೆಟ್ಟಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ ಎಂದು ವ್ಯಂಗ್ಯವಾಡಿದರು.

2028ರ ಚುನಾವಣೆಯಲ್ಲಿ ಸುನಿಲ್ ಕುಮಾರ್ಗೆ ಗೆಲುವಿನ ವಿಶ್ವಾಸ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುನಿಲ್ ಕುಮಾರ್ ಅವರನ್ನು ಸೋಲಿಸಲು ಪ್ರಯತ್ನಿಸಿದವರಿಗೆ ಪರಶುರಾಮ ದೇವರ ಆಶೀರ್ವಾದ ಹಾಗೂ ಕ್ಷೇತ್ರದ ಜನರ ಬೆಂಬಲದಿಂದ ತಕ್ಕ ಉತ್ತರ ದೊರೆತಿದೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿಯೂ ಸುನಿಲ್ ಕುಮಾರ್ ಅವರು 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದೆ ನಡೆಯಲಿರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಮತಯಾಚನೆಗೆ ಬರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಷೇತ್ರದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸವಾಲು ಹಾಕಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರಶ್ನೆ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಹರೀಶ್ ಪೂಂಜಾ, ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾಗಿದ್ದು, ಲೆಕ್ಕಾಚಾರದ ಪ್ರಕಾರ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಯ ಖಾತೆಗೆ ಈವರೆಗೆ ₹84 ಸಾವಿರ ಜಮೆಯಾಗಬೇಕಿತ್ತು. ಆದರೆ ಹಲವರಿಗೆ ಇನ್ನೂ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿದರು. ಇದಲ್ಲದೆ, ಮರಳು ಹಾಗೂ ಕೆಂಪು ಕಲ್ಲಿನ ದರ ಗಗನಕ್ಕೇರಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಿಸಿಕೊಳ್ಳುವುದು ಕಷ್ಟವಾಗಿದೆ. ಈ ಸಮಸ್ಯೆಗಳ ಕುರಿತು ಉದಯ್ ಕುಮಾರ್ ಶೆಟ್ಟಿ ಅವರು ಸರ್ಕಾರದ ವಿರುದ್ಧ ಹೋರಾಟ ನಡೆಸಲಿ ಎಂದು ಸವಾಲು ಹಾಕಿದರು.
ನಕಲಿ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಎಚ್ಚರಿಕೆ

ಉದಯ್ ಕುಮಾರ್ ಶೆಟ್ಟಿ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇಂತಹ ಕೃತ್ಯಗಳನ್ನು ತಕ್ಷಣ ನಿಲ್ಲಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಜೈಲು ಶಿಕ್ಷೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು. ಇತಿಹಾಸ ಪ್ರಸಿದ್ಧ ಭೈರವರಸರ ನಾಡಾಗಿರುವ ಕಾರ್ಕಳದ ಗೌರವ ಮತ್ತು ಮಾನ-ಮರ್ಯಾದೆಗೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಹೇಳಿದರು.

ಮಹಾಮಸ್ತಕಾಭಿಷೇಕಕ್ಕೂ ಮುನ್ನ ಅನುದಾನ ಬಿಡುಗಡೆಗೆ ಆಗ್ರಹ
ಮುಂಬರುವ ಮಹಾಮಸ್ತಕಾಭಿಷೇಕಕ್ಕೂ ಮುನ್ನ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಂಡು ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿಗೆ ತಕ್ಷಣ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಸಮಾಜ ಹಾಗೂ ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ತೀವ್ರ ಹೋರಾಟ ನಡೆಸಲಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


