Saturday, May 30, 2026

spot_img

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವ ನಿರೀಕ್ಷೆ; ಉತ್ತಮ ಆಡಳಿತ ನೀಡಿ ಕಾಂಗ್ರೆಸ್‌ಗೆ ಗೆಲುವು ತಂದುಕೊಡಲಿ: ಜಯಪ್ರಕಾಶ್ ಹೆಗ್ಡೆ

ಉಡುಪಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ರಾಜಕೀಯ ಬೆಳವಣಿಗೆಗಳ ನಡುವೆಯೇ ಮಾಜಿ ಸಚಿವ ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಆಯ್ಕೆಯಾಗುವ ಕುರಿತು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಅವರ ಕಾರ್ಯವನ್ನು ಅಭಿನಂದಿಸುವುದಾಗಿ ಹೇಳಿದರು. ಅಧಿಕಾರ ಹಸ್ತಾಂತರ ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೆ ಸರಾಗವಾಗಿ ನಡೆದಿರುವುದು ಸಂತಸದ ವಿಚಾರ ಎಂದರು.

ಮುಂದಿನ ಮುಖ್ಯಮಂತ್ರಿ ಹೊಸ ಮಂತ್ರಿಮಂಡಲ ರಚನೆ ಮಾಡಲಿದ್ದು, ಉತ್ತಮ ಆಡಳಿತ ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು. ರಾಜ್ಯ ಸರ್ಕಾರದ ಸಾಲದ ಪ್ರಮಾಣ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಜಯಪ್ರಕಾಶ್ ಹೆಗ್ಡೆ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಸಾಲ ಮಾಡುವುದು ಸಹಜ ಪ್ರಕ್ರಿಯೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 130 ಡಾಲರ್ ಇದ್ದರೂ ದೇಶದಲ್ಲಿ ಪೆಟ್ರೋಲ್ ದರವನ್ನು 56 ರಿಂದ 60 ರೂಪಾಯಿಗಳ ನಡುವೆ ಕಾಯ್ದುಕೊಳ್ಳಲಾಗಿತ್ತು ಎಂದು ಅವರು ಹೇಳಿದರು.

ಪ್ರಸ್ತುತ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದರೂ ಗ್ರಾಹಕರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಇಂಧನ ದರ ಇಳಿಕೆ ಮಾಡದೆ ಕೇಂದ್ರ ಸರ್ಕಾರ ಜನರ ಮೇಲೆ ಹೆಚ್ಚುವರಿ ಹೊರೆ ಹಾಕುತ್ತಿದೆ ಎಂದು ಆರೋಪಿಸಿದರು. ಇರಾನ್ ಹಾಗೂ ರಷ್ಯಾದಂತಹ ರಾಷ್ಟ್ರಗಳಿಂದ ಕಡಿಮೆ ದರದಲ್ಲಿ ಕಚ್ಚಾ ತೈಲ ಪಡೆಯುವ ಅವಕಾಶಗಳಿದ್ದರೂ, ದೇಶದ ವಿದೇಶಾಂಗ ನೀತಿಯಲ್ಲಿ ಉಂಟಾಗಿರುವ ಬದಲಾವಣೆಗಳಿಂದ ಭಾರತ ಈಗ ಅಮೆರಿಕದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟೀಕಿಸಿದರು. ನೀಟ್ ಪರೀಕ್ಷೆ ಕುರಿತು ಮಾತನಾಡಿದ ಅವರು, ಪರೀಕ್ಷೆಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಬೇಕು ಎಂದು ಒತ್ತಾಯಿಸಿದರು. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶಗಳು ಹೆಚ್ಚಲಿದ್ದು, ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚಿನ ಸೀಟುಗಳು ಲಭ್ಯವಾಗಲಿವೆ ಎಂದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೊಣೆ ಹೊರುತ್ತೇನೆ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಅವರು, ಹೊಣೆ ಹೊರುತ್ತೇನೆ ಎಂದು ಹೇಳುವುದು ಮಾತ್ರ ಸಾಕಾಗುವುದಿಲ್ಲ. ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಜನರಿಗೆ ತಿಳಿಯಬೇಕು ಎಂದು ಹೇಳಿದರು.

ಕರಾವಳಿ ಭಾಗಕ್ಕೆ ಸಚಿವ ಸ್ಥಾನ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟ ರಚನೆ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹೈಕಮಾಂಡ್ ತೀರ್ಮಾನಿಸುವ ವಿಚಾರ ಎಂದು ಹೇಳಿದರು. ಕರಾವಳಿ ಜಿಲ್ಲೆಗಳಿಗೆ ಸಚಿವ ಸ್ಥಾನ ದೊರೆತರೆ ಉತ್ತಮವಾಗಿದ್ದು, ಉಸ್ತುವಾರಿ ಸಚಿವರಾಗಿ ಸ್ಥಳೀಯ ವ್ಯಕ್ತಿಯನ್ನೇ ಅಥವಾ ಕನಿಷ್ಠ ಕರಾವಳಿ ಭಾಗಕ್ಕೆ ಪರಿಚಿತರಾಗಿರುವ ಪಕ್ಕದ ಜಿಲ್ಲೆಯವರನ್ನಾದರೂ ನೇಮಕ ಮಾಡಿದರೆ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಅವಕಾಶ ಕೇಳುವ ಹಕ್ಕು ಹಾಗೂ ಸ್ವಾತಂತ್ರ್ಯವಿದೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles