ಉಡುಪಿ : ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿಯ ಅಧ್ಯಕ್ಷ ಟಿ. ರಘು ಮೂರ್ತಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು ಅತ್ಯಗತ್ಯ ಎಂದು ಹೇಳಿದರು. ಉಡುಪಿ ನಗರಕ್ಕೆ ವಾರಾಹಿ ನದಿಯಿಂದ ಪ್ರತಿದಿನ 45 ಎಂ.ಎಲ್.ಡಿ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸ್ತುತ ಉಡುಪಿ ನಗರಕ್ಕೆ ಬಜೆ ಹಾಗೂ ಹಾಲಾಡಿಯ ಕೆ.ಎನ್.ಎನ್.ಎಲ್ ನಾಲೆಯಿಂದ ತಾತ್ಕಾಲಿಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಭಟ್ಕಳ ಜಾಕ್ವೆಲ್ನಿಂದ ಹಾಲಾಡಿ ನೀರು ಶುದ್ಧೀಕರಣ ಘಟಕದವರೆಗೆ ಸುಮಾರು 3 ಕಿ.ಮೀ ಪೈಪ್ಲೈನ್ ಕಾಮಗಾರಿಗೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ತಿಳಿಸಿದರು. ಕಾಮಗಾರಿಗಳ ವಿಳಂಬದಿಂದ ಯೋಜನಾ ವೆಚ್ಚ ದಿನೇದಿನೇ ಏರಿಕೆಯಾಗುತ್ತಿದ್ದು, ಹೆಚ್ಚುವರಿ ಅನುದಾನದ ಅವಶ್ಯಕತೆ ಎದುರಾಗುತ್ತಿದೆ. ಇದರಿಂದ ಸರ್ಕಾರಕ್ಕೂ ಆರ್ಥಿಕ ಹೊರೆ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು.

ಇನ್ನು ಹಾಲಾಡಿ ನೀರು ಶುದ್ಧೀಕರಣ ಘಟಕದ ಪಕ್ಕದ ವಾರಾಹಿ ಎಡದಂಡೆ ಕಾಲುವೆ ಮೂಲಕ ಕೆ.ಎನ್.ಎನ್.ಎಲ್ ಇಲಾಖೆಯು ಡಿಸೆಂಬರ್ನಿಂದ ಜೂನ್ ಅಂತ್ಯದವರೆಗೆ ನೀರು ಪೂರೈಸಲು ಒಪ್ಪಂದ ಮಾಡಿಕೊಂಡಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ವರ್ಷಪೂರ್ತಿ ನೀರು ಪೂರೈಕೆ ಮಾಡಲು ಜಲ ಸಂಪನ್ಮೂಲ ಇಲಾಖೆಯಿಂದ ಅನುಮತಿ ಪಡೆಯುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಸಮಿತಿಯ ಸದಸ್ಯ ಐವನ್ ಡಿಸೋಜಾ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.



