ಉಡುಪಿ : ಕೇವಲ ಸಭೆ, ಹೋರಾಟಗಳಿಂದ ಕಸ್ತೂರಿ ರಂಗನ್ ವರದಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ವರದಿಯಿಂದ ಬಾಧಿತವಾಗುವ ಉಡುಪಿ ಜಿಲ್ಲೆಯ 35 ಗ್ರಾಮಗಳಲ್ಲೂ ಗ್ರಾಮಸಭೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಮಾಹಿತಿ ಪಡೆದು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ವಿಧಾನಪರಿಷತ್ನ ಮಾಜಿ ಸಭಾಪತಿ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಆಗ್ರಹಿಸಿದರು.

ಕುಂದಾಪುರದ ದಿ. ಕುಶಲ ಹೆಗ್ಡೆ ಮೆಮೋರಿಯಲ್ ಹಾಲ್ನಲ್ಲಿ ರೈತ ಸಂಘದ ವತಿಯಿಂದ ಆಯೋಜಿಸಿದ್ದ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿಚಾರದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಗಳ ನಡುವೆ ಗೊಂದಲವಿದ್ದು, ಸರ್ಕಾರ ಇದನ್ನು ಪರಿಹರಿಸಬೇಕು. ರೈತ ಸಂಘ ಸದಾ ಬಾಧಿತರ ಪರವಾಗಿರಲಿದೆ ಎಂದರು.

ಸೋಮೇಶ್ವರ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಮಾತನಾಡಿ, ರಾಜ್ಯದ ಪರಿಸರ ಸೂಕ್ಷ್ಮ ವಲಯದ ಗಡಿಗಳ ಕುರಿತು ಇನ್ನೂ ಭೌತಿಕ ಸಮೀಕ್ಷೆ ನಡೆದಿಲ್ಲ. ಕೇರಳದಲ್ಲಿ ಅಕ್ಷಾಂಶ-ರೇಖಾಂಶ ಆಧಾರದಲ್ಲಿ ಸಮೀಕ್ಷೆ ನಡೆಸಿ ಗಡಿ ಗುರುತಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದ್ದು, ಅದನ್ನು ಕೇಂದ್ರ ಸರ್ಕಾರ ಪುರಸ್ಕರಿಸಿದೆ ಎಂದರು.ರಾಜ್ಯದಲ್ಲಿ ಹಿಂದಿನ ಸರ್ಕಾರಗಳು ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯನ್ನು ತಿರಸ್ಕರಿಸಿದ್ದರಿಂದ ಭೌತಿಕ ಸಮೀಕ್ಷೆ ನಡೆಯಲಿಲ್ಲ. ಪರಿಸರ ಸೂಕ್ಷ್ಮ ವಲಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರವಾಸೋದ್ಯಮ ಇಲಾಖೆ ಕ್ರಿಯಾ ಯೋಜನೆ ಹಾಗೂ ಮಾಸ್ಟರ್ ಪ್ಲಾನ್ ರೂಪಿಸಬೇಕಿದೆ ಎಂದು ತಿಳಿಸಿದರು.

ರೈತ ಸಂಘದ ಮುಖಂಡ ಸತೀಶ್ ಕಿಣಿ ಬೆಳ್ವೆ ಮಾತನಾಡಿ, ಹಿಂದಿನ ಆರು ಕರಡು ಅಧಿಸೂಚನೆಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಉಡುಪಿ ಜಿಲ್ಲೆಯ 35 ಗ್ರಾಮಗಳನ್ನು ವ್ಯಾಪ್ತಿಗೆ ಸೇರಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ ಎಂದರು. ವಂಡ್ಸೆ ಗ್ರಾಪಂ ಮಾಜಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಮಾತನಾಡಿ, ವರದಿ ಸಿದ್ಧಪಡಿಸುವ ವೇಳೆ ಭೌತಿಕ ಸಮೀಕ್ಷೆ ನಡೆಸಿಲ್ಲ. ಬಾಧಿತ ಗ್ರಾಮಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನೂ ನಡೆಸಿಲ್ಲ ಎಂದು ಆರೋಪಿಸಿದರು. ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಮಾತನಾಡಿ, ವರದಿಯ ವ್ಯಾಪ್ತಿ ಮತ್ತು ಮಾನದಂಡಗಳ ಬಗ್ಗೆ ಗ್ರಾಮಸ್ಥರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಸಭೆಯಲ್ಲಿ ಕೊಲ್ಲೂರು ವನ್ಯಜೀವಿ ವಿಭಾಗದ ಡಿಎಫ್ಒ ಕಿರಣ್ ಬಾಬು, ಕುಂದಾಪುರ ಆರ್ಎಫ್ಒ ರಾಘವೇಂದ್ರ ನಾಯ್ಕ್ ಸೇರಿದಂತೆ ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


