ಉಡುಪಿ: ಗಂಗೊಳ್ಳಿ ಸಮೀಪ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್ವೊಂದು ಅಲೆಗಳ ಹೊಡೆತಕ್ಕೆ ಬಿರುಕು ಬಿಟ್ಟು ಮುಳುಗಲು ಆರಂಭಿಸಿದ ಘಟನೆ ನಡೆದಿದೆ. ಬೋಟ್ನಲ್ಲಿದ್ದ 30 ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಗಂಗೊಳ್ಳಿಯಿಂದ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಭಾರಿ ಅಲೆಗಳ ಹೊಡೆತಕ್ಕೆ ಬೋಟ್ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಬೋಟ್ಗೆ ನೀರು ನುಗ್ಗಿ ಮುಳುಗಲು ಆರಂಭಿಸಿದ ಹಿನ್ನೆಲೆಯಲ್ಲಿ ಮೀನುಗಾರರು ಆತಂಕಕ್ಕೊಳಗಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ಕರಾವಳಿ ಕಾವಲು ಪಡೆ ತಕ್ಷಣ ಕಾರ್ಯಪ್ರವೃತ್ತವಾಯಿತು. ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ರಮೇಶ್ ಕೆ. ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ಕಾವಲು ಪಡೆಯ ಸಿಬ್ಬಂದಿ ಬೋಟ್ನಲ್ಲಿದ್ದ ಎಲ್ಲ 30 ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಬಳಿಕ ಮೀನುಗಾರರು ಸುರಕ್ಷಿತವಾಗಿ ಗಂಗೊಳ್ಳಿ ತೀರ ಪ್ರದೇಶ ತಲುಪಿದರು.

ಸಮುದ್ರದಲ್ಲಿ ಬೋಟ್ ಮುಳುಗಲು ಆರಂಭಿಸಿದ ವೇಳೆ ತಕ್ಷಣ ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


