ಉಡುಪಿ : ಕಾಪು ಕಡಲತೀರದಲ್ಲಿ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿಹೋದ ದಾರುಣ ಘಟನೆಗೆ ಸಂಬಂಧಿಸಿದಂತೆ, ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಸೋಮವಾರ ಪತ್ತೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪ ನಿವಾಸಿ ಅಲ್ತಾಫ್ ಅವರ ಪುತ್ರ ಸಮೀರ್ (20), ದಾವಣಗೆರೆ ಜಿಲ್ಲೆಯ ಅಹಮದ್ ನಗರದ ಜಿಯಾವುಲ್ಲ ಅವರ ಪುತ್ರ ಮಲ್ಲಿಕ್ ರಿಹಾನ್ (15) ಮೃತಪಟ್ಟವರು. ದಾವಣಗೆರೆ ಮೂಲದ ಜಿಯಾವುಲ್ಲ ಹಾಗೂ ಅವರ ಸಂಬಂಧಿಕರು ಸೇರಿದಂತೆ ಸುಮಾರು 10ರಿಂದ 12 ಮಂದಿ ಕುಟುಂಬ ಸದಸ್ಯರು ಪ್ರವಾಸದ ನಿಮಿತ್ತ ಉಡುಪಿಗೆ ಆಗಮಿಸಿದ್ದರು. ನ. 22ರಂದು ಭಾನುವಾರ ಸಂಜೆ ಸುಮಾರು 4.30ರ ವೇಳೆಗೆ ಕಾಪು ಬೀಚ್ಗೆ ತೆರಳಿದ್ದ ಕುಟುಂಬದ ಯುವಕರು ಸಮುದ್ರದಲ್ಲಿ ಆಟವಾಡಲು ನೀರಿಗಿಳಿದಿದ್ದರು.

ಈ ಸಂದರ್ಭದಲ್ಲಿ ಸಮುದ್ರದಲ್ಲಿ ಏಕಾಏಕಿ ಉಂಟಾದ ಬಲವಾದ ಅಲೆಗಳು ಹಾಗೂ ನೀರಿನ ಸೆಳೆತಕ್ಕೆ ಸಿಲುಕಿ ಐವರು ಯುವಕರು ಅಪಾಯಕ್ಕೆ ಸಿಲುಕಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಲೈಫ್ಗಾರ್ಡ್ ಸಿಬ್ಬಂದಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಓರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.

ನಾಪತ್ತೆಯಾದ ಸಮೀರ್ ಹಾಗೂ ಮಲ್ಲಿಕ್ ರಿಹಾನ್ಗಾಗಿ ಸ್ಥಳೀಯ ಮೀನುಗಾರರು, ಲೈಫ್ಗಾರ್ಡ್ ಸಿಬ್ಬಂದಿ, ಕರಾವಳಿ ಕಾವಲುಪಡೆ ತಂಡ ಶೋಧ ಕಾರ್ಯಾಚರಣೆ ನಡೆಸಿದೆ. ಸೋಮವಾರ ಬೆಳಗ್ಗೆ ಸಮೀರ್ನ ಮೃತದೇಹ ಪತ್ತೆಯಾಗಿದ್ದು, ನಂತರ ಮಲ್ಲಿಕ್ ರಿಹಾನ್ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರವಾಸದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ದುರಂತ ಸಂಭವಿಸಿರುವುದು ತೀವ್ರ ನೋವು ತಂದಿದೆ.


