ಕಾರ್ಕಳ: ಕಾರ್ಕಳದ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಬೇಕಿದ್ದ ಪರಶುರಾಮ ಥೀಮ್ ಪಾರ್ಕ್ ವಿವಾದಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದರು. ಬೆಂಗಳೂರು ಮತ್ತು ಮುಂಬೈನಲ್ಲಿ ನೆಲೆಸಿರುವ ಕಾರ್ಕಳದ ಬಂಧುಗಳು ಹಾಗೂ ಜನಾಗ್ರಹ ಸಮಿತಿ ಆಯೋಜಿಸಿದ್ದ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಥೀಮ್ ಪಾರ್ಕ್ನ ಪರಶುರಾಮ ಮೂರ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಿ ಮರುವಿನ್ಯಾಸಗೊಳಿಸುವ ಉದ್ದೇಶದಿಂದ ಶಿಲ್ಪಿಗಳು 2023ರ ಸೆಪ್ಟೆಂಬರ್ನಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಅದರಂತೆ ಅಕ್ಟೋಬರ್ 4ರಂದು ಜಿಲ್ಲಾಧಿಕಾರಿಗಳು ಅಧಿಕೃತ ಆದೇಶ ಹೊರಡಿಸಿ, ತಹಶೀಲ್ದಾರ್ ಮೂಲಕ ಸಾರ್ವಜನಿಕ ಪ್ರಕಟಣೆಯನ್ನೂ ನೀಡಿದ್ದರು. ಆದರೆ ಶಿಲ್ಪಿಗಳು ಮರುವಿನ್ಯಾಸಕ್ಕೆ ಮುಂದಾದಾಗ ಮೂರ್ತಿ ಕಳ್ಳತನವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವದಂತಿ ಹರಡಿ ಪ್ರತಿಭಟನೆ ನಡೆಸಿದರು ಎಂದು ದೂರಿದರು.

ಹಿತರಕ್ಷಣಾ ವೇದಿಕೆಯ ಹೆಸರಿನಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಿಂದ ದೂರು ಕೊಡಿಸುವುದು, ರಸ್ತೆಗೆ ಮಣ್ಣು ಹಾಕಿ ಕಾಮಗಾರಿಗೆ ತಡೆಯೊಡ್ಡುವುದು ಹಾಗೂ ಎಫ್ಐಆರ್ ದಾಖಲಿಸುವ ಮೂಲಕ ಇಡೀ ಪ್ರಕರಣವನ್ನು ರಾಜಕೀಯಗೊಳಿಸಲಾಗಿದೆ. ತನಿಖೆಯ ನೆಪದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರವಾಸೋದ್ಯಮ ಯೋಜನೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು.ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣಗಳ ತನಿಖೆಯನ್ನು ಎರಡು-ಮೂರು ತಿಂಗಳಲ್ಲಿ ಮುಗಿಸಿದ ಸರ್ಕಾರಕ್ಕೆ ಪರಶುರಾಮ ಮೂರ್ತಿಯ ಗುಣಮಟ್ಟ ಪರೀಕ್ಷಿಸಲು ನಾಲ್ಕು ವರ್ಷಗಳು ಬೇಕೇ ಎಂದು ಪ್ರಶ್ನಿಸಿದರು.

ಮೂರ್ತಿ ನಿರ್ಮಾಣಕ್ಕೆ ಮೀಸಲಿಟ್ಟ ಎರಡು ಕೋಟಿ ರೂಪಾಯಿಗಳಲ್ಲಿ ಇನ್ನೂ ಒಂದು ಕೋಟಿ ರೂಪಾಯಿ ಬಿಡುಗಡೆಯಾಗಿಲ್ಲ. ಹೀಗಿರುವಾಗ ಭ್ರಷ್ಟಾಚಾರದ ಆರೋಪ ಎಲ್ಲಿಂದ ಬಂತು? ಕಳೆದ 20 ವರ್ಷಗಳಿಂದ ನನ್ನ ವಿರುದ್ಧ ಒಂದೇ ಒಂದು ಆರೋಪವನ್ನೂ ಕಾಂಗ್ರೆಸ್ಗೆ ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಸವಾಲು ಹಾಕಿದರು.

ಕಾರ್ಕಳದಲ್ಲಿ ಬಾಹುಬಲಿ, ಕೋಟಿ-ಚೆನ್ನಯ್ಯ ಹಾಗೂ ಪರಶುರಾಮ ಥೀಮ್ ಪಾರ್ಕ್ಗಳ ಸಂಗಮವಿದ್ದು, ಇದು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಪರಶುರಾಮ ಥೀಮ್ ಪಾರ್ಕ್ ಅನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.


