Friday, November 20, 2026

spot_img

ಹಕ್ಕುಪತ್ರ ಶುಲ್ಕ ಏರಿಕೆ, ಅನಧಿಕೃತ ಹೋಂ ಸ್ಟೇ ವಿರೋಧಿಸಿ ಕೋಡಿ ಗ್ರಾಮ ಪಂಚಾಯಿತಿ ಎದುರು ಗ್ರಾಮಸ್ಥರ ಪ್ರತಿಭಟನೆ

ಉಡುಪಿ : ಹಕ್ಕುಪತ್ರ ಪಡೆಯಲು ವಿಧಿಸಲಾಗುತ್ತಿರುವ ಶುಲ್ಕದ ದಿಢೀರ್ ಏರಿಕೆ ಹಾಗೂ ಸಿಆರ್‌ಝಡ್ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿರುವ ಅನಧಿಕೃತ ಕಟ್ಟಡದಲ್ಲಿ ಹೋಂ ಸ್ಟೇ ನಡೆಸುತ್ತಿರುವುದನ್ನು ಖಂಡಿಸಿ ಕೋಡಿ ಗ್ರಾಮ ಪಂಚಾಯಿತಿ ಎದುರು ಗ್ರಾಮಸ್ಥರು ಶುಕ್ರವಾರದಂದು ಶಾಂತಿಯುತ ಪ್ರತಿಭಟನೆ ನಡೆಸಿದರು.

ಸರ್ಕಾರದ ಆದೇಶದಂತೆ ಈ ಹಿಂದೆ ಹಕ್ಕುಪತ್ರ ಪಡೆಯಲು 5,000 ರೂ. ಶುಲ್ಕ ನಿಗದಿಯಾಗಿತ್ತು. ಆದರೆ ಈಗ ಅದನ್ನು ಏಕಾಏಕಿ 9,500 ರೂ.ಗಳಿಗೆ ಏರಿಸಲಾಗಿದೆ. ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಗಳು ಜಾಗದ ಮೌಲ್ಯಮಾಪನಹೆಚ್ಚಾಗಿದೆ ಎಂದು ಉತ್ತರ ನೀಡಿದ್ದಾರೆ. ಆದರೆ, ಇದೇ ಜಿಲ್ಲೆಯ ಕೊಡೂರು ಗ್ರಾಮದಲ್ಲಿ ಇಂದಿಗೂ 500 ರೂ. ಶುಲ್ಕವಿದೆ. ಬಡವರು ಮತ್ತು ಮೀನುಗಾರರು ದುಬಾರಿ ಶುಲ್ಕ ಭರಿಸುವುದು ಹೇಗೆ? ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಕ್ಕುಪತ್ರ ನೀಡಲಾದ ಜಾಗದಲ್ಲಿ ಕೊಕೊ ಬೇ ಎಂಬ ಹೋಂ ಸ್ಟೇಯನ್ನು ನಿಯಮಬಾಹಿರವಾಗಿ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕಟ್ಟಡ ಪರವಾನಗಿ ಮತ್ತು ಸಿಆರ್‌ಝಡ್ ಅನುಮತಿ ಇಲ್ಲದಿದ್ದರೂ, ಕೇವಲ ಪಂಚಾಯಿತಿಯ ನಿರಾಕ್ಷೇಪಣಾ ಪತ್ರ ಪಡೆದು ಪ್ರವಾಸೋದ್ಯಮ ಇಲಾಖೆಯಿಂದ ನೋಂದಣಿ ಮಾಡಿಕೊಳ್ಳಲಾಗಿದೆ. ಕಟ್ಟಡ ಪರವಾನಗಿ ಇಲ್ಲದ ಕಾರಣ ಪಂಚಾಯಿತಿಯಿಂದ ನೋಟಿಸ್ ನೀಡಿದ್ದರೂ, ಅದನ್ನು ಲೆಕ್ಕಿಸದೆ ರಾಜಾರೋಷವಾಗಿ ಹೋಂ ಸ್ಟೇ ನಡೆಸಲಾಗುತ್ತಿದೆ. ಈ ಅನಧಿಕೃತ ಕಟ್ಟಡಕ್ಕೆ ಸಂಬಂಧಿಸಿದಂತೆ 2025ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸಂಬಂಧಪಟ್ಟ ಇಲಾಖೆಗಳು ಮೌನ ವಹಿಸಿವೆ ಎಂದು ಪ್ರತಿಭಟನಾಕಾರರು ದೂರಿದರು. ಅಲ್ಲದೆ, ಇಂತಹ ವಾಣಿಜ್ಯ ಚಟುವಟಿಕೆಗಳಿಂದಾಗಿ ಈ ಭಾಗದ ಭೂಮಿಯ ಮೌಲ್ಯ ಕೃತಕವಾಗಿ ಹೆಚ್ಚಾಗಿ ಬಡವರ ಹಕ್ಕುಪತ್ರದ ಶುಲ್ಕ ಏರಿಕೆಯಾಗುತ್ತಿದೆ ಎಂದು ಆರೋಪಿಸಿದರು.

ಬಡವರು ಮನೆ ಕಟ್ಟಲು ಡೋರ್ ನಂಬರ್ ಕೇಳಿದರೆ ಹಕ್ಕುಪತ್ರವಿಲ್ಲ ಎಂದು ನಿರಾಕರಿಸುವ ಅಧಿಕಾರಿಗಳು, ಶ್ರೀಮಂತರಿಗೆ 2021-22ರಲ್ಲೇ ಡೋರ್ ನಂಬರ್ ನೀಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಇರಬೇಕು ಎಂದು ಗ್ರಾಮಸ್ಥ ಸುದಿನಾ ಒತ್ತಾಯಿಸಿದರು. ಇದೇ ವೇಳೆ, ಹೋಂ ಸ್ಟೇ ಮಾಲೀಕರಾಗಿರುವ ಸ್ಥಳೀಯ ಸಹಕಾರಿ ಸಂಘವೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಂಘದಲ್ಲಿ ಸಾಲ ಪಡೆದ ಸದಸ್ಯರಿಗೆ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಒತ್ತಡ ಹೇರಿದ್ದಾರೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೂ ಬೆದರಿಕೆ ಕರೆಗಳು ಬಂದಿವೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ತಮ್ಮ ಬೇಡಿಕೆಗಳಿಗೆ ಸೂಕ್ತ ಉತ್ತರ ಸಿಗುವವರೆಗೂ ಹಾಗೂ ಅನಧಿಕೃತ ಹೋಂ ಸ್ಟೇ ಸ್ಥಗಿತಗೊಳಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles