ಉಡುಪಿ: ವೃದ್ಧರೊಬ್ಬರನ್ನು ತಡೆದು ತಲವಾರಿನಿಂದ ಕಡಿದು ಕೊಲೆ ಮಾಡಲು ಯತ್ನಿಸಿ, ಬಳಿಕ ರಾತ್ರಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ನ. 4ರಂದು ಬೆಳಗ್ಗೆ ನಾವುಂದದ ಕೋಯಾನಗರದಲ್ಲಿ ನಡೆದಿದೆ. ನಾವುಂದದ ಕೋಯಾನಗರ ನಿವಾಸಿ ಜಿ.ಎಂ. ಸತ್ತಾರ್ (60) ಎಂಬವರು ಸ್ಕೂಟರ್ನಲ್ಲಿ ಮನೆಯಿಂದ ನಾವುಂದ ಕಡೆಗೆ ತೆರಳುತ್ತಿದ್ದಾಗ, ಖತೀಜಾ ಅವರ ಮನೆಯ ಗೇಟಿನ ಬಳಿ ಎದುರಿನಿಂದ ಸ್ಕೂಟರ್ನಲ್ಲಿ ಬಂದ ಸವಾದ್ ಅಲಿಯಾಸ್ ಅಚ್ಚು ಹಾಗೂ ಇತರ ಇಬ್ಬರು ಸಹಚರರು ಅವರ ವಾಹನಕ್ಕೆ ಅಡ್ಡಹಾಕಿ ತಡೆದಿದ್ದಾರೆ.

ಈ ವೇಳೆ ಸವಾದ್ ಸ್ಕೂಟರ್ನಲ್ಲಿದ್ದ ತಲವಾರು ತೆಗೆದು, ಸತ್ತಾರ್ ಅವರನ್ನು ಇಲ್ಲಿಯೇ ಕಡಿದು ಕೊಲ್ಲುವುದಾಗಿ ಬೆದರಿಸಿ ಹತ್ಯೆ ಉದ್ದೇಶದಿಂದ ತಲವಾರು ಬೀಸಿದ್ದಾನೆ ಎನ್ನಲಾಗಿದೆ. ತಕ್ಷಣ ತಪ್ಪಿಸಿಕೊಂಡ ಸತ್ತಾರ್ ಖತೀಜಾ ಅವರ ಮನೆಯ ಗೇಟಿನೊಳಗೆ ಓಡಿ ಹೋಗಿದ್ದು, ಆರೋಪಿಗಳು ಕಂಪೌಂಡ್ಗೆ ಅತಿಕ್ರಮ ಪ್ರವೇಶ ಮಾಡಿ ಅವರನ್ನು ಬೆನ್ನಟ್ಟಿದ್ದಾರೆ. ಸತ್ತಾರ್ ತಂಗಿಯ ಮನೆಯೊಳಗೆ ನುಗ್ಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಳಿಕ ಆರೋಪಿಗಳು ಗೇಟಿನಿಂದ ಹೊರಹೋಗುವಾಗ, ಈಗ ತಪ್ಪಿಸಿಕೊಂಡಿದ್ದೀಯಾ, ಇಂದು ರಾತ್ರಿ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


