Thursday, November 5, 2026

spot_img

ಉದ್ಯಮಿಗಳಿಗೆ ಕೋಟ್ಯಂತರ ರೂ.ಗೆ ಬೆದರಿಕೆ: ಭೂಗತ ಪಾತಕಿಗೆ ಮೊಬೈಲ್ ನಂಬರ್ ಪೂರೈಸಿದ ಆರೋಪಿ ಬಂಧನ

ಉಡುಪಿ: ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉಡುಪಿ ಜಿಲ್ಲೆಯ ಉದ್ಯಮಿಗಳಿಗೆ ಇಂಟರ್‌ನ್ಯಾಶನಲ್ ನಂಬರ್‌ಗಳಿಂದ ಕರೆ ಮಾಡಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಮುದರಂಗಡಿ ಡೇವಿಡ್ ಡಿಸೋಜಾ ಅವರ ಕೊಲೆಯ ಬಳಿಕ, ಭೂಗತ ಪಾತಕಿ ಹೇಮಂತ್ ಪೂಜಾರಿ ಪಡುಬಿದ್ರೆ, ಮಣಿಪಾಲ, ಕಾಪು ಮತ್ತು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸುತ್ತಿರುವ ಉದ್ಯಮಿಗಳನ್ನು ಗುರಿಯಾಗಿಸಿಕೊಂಡಿದ್ದಾನೆ ಎನ್ನಲಾಗಿದೆ. ಇಂಟರ್‌ನ್ಯಾಶನಲ್ ನಂಬರ್‌ಗಳಿಂದ ಉದ್ಯಮಿಗಳಿಗೆ ಕರೆ ಮಾಡಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗುತ್ತಿತ್ತು. ಹಣ ನೀಡದಿದ್ದಲ್ಲಿ ಈ ಹಿಂದೆ ಶಿರ್ವದಲ್ಲಿ ಕೊಲೆಯಾದ ಡೇವಿಡ್ ಡಿಸೋಜಾ ಅವರ ರೀತಿಯಲ್ಲಿಯೇ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಲಾಗಿತ್ತು. ಈ ಸಂಬಂಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದವು.

ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಭೂಗತ ಪಾತಕಿ ಹೇಮಂತ್ ಪೂಜಾರಿಗೆ ಉದ್ಯಮಿಗಳ ಮೊಬೈಲ್ ನಂಬರ್‌ಗಳನ್ನು ಪೂರೈಸಿ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಸಾಂತೂರು ಗ್ರಾಮದ ಹರೀಶ್ ಪೂಜಾರಿ (45) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ, ಶಿರ್ವ ಪೊಲೀಸ್ ಠಾಣೆಯ ಪ್ರಕರಣದ ದೂರುದಾರರ ಮೊಬೈಲ್ ನಂಬರ್‌ನ್ನು ಹೇಮಂತ್ ಪೂಜಾರಿಗೆ ನೀಡುವ ಮೂಲಕ ಕೃತ್ಯಕ್ಕೆ ಸಹಕರಿಸಿರುವುದಾಗಿ ಹರೀಶ್ ಪೂಜಾರಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್ 02ರಂದು ಹರೀಶ್ ಪೂಜಾರಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಉಡುಪಿ ಜಿಲ್ಲೆಯ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ನಡೆದಿದ್ದ ಬೆದರಿಕೆ ಪ್ರಕರಣಗಳ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles