ಉಡುಪಿ : ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಈಶ್ವರನಗರದಲ್ಲಿರುವ ಜನನಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಮೀಪ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆಗಸ್ಟ್ 2ರಂದು ರಾತ್ರಿ ಸುಮಾರು 11.50ರ ವೇಳೆಗೆ ಯಶ್ರಾಜ್, ಅವರ ತಮ್ಮ ಪವನ್ ಕುಮಾರ್ ಹಾಗೂ ಸ್ನೇಹಿತ ಶ್ರೇಯಸ್ ರಸ್ತೆ ಮೂಲಕ ತೆರಳುತ್ತಿದ್ದ ವೇಳೆ, ಅಕ್ಷಯ್ ಎ., ಪುನೀತ್ ಎಸ್., ಶಮಂತ್ ಕೆ.ಆರ್. ಹಾಗೂ ಯಶವಂತ್ ಬಿ.ಜೆ. ಎಂಬ ಆರೋಪಿಗಳು ಎರಡು ಕಾರುಗಳಲ್ಲಿ ಬಂದು ಪವನ್ ಕುಮಾರ್ ಅವರನ್ನು ತಡೆದಿದ್ದಾರೆ ಎನ್ನಲಾಗಿದೆ.

ಬಳಿಕ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಹಾಗೂ ಕಾಲಿನಿಂದ ಹಲ್ಲೆ ನಡೆಸಿದ ಆರೋಪಿಗಳು ಮೆಟಲ್ ಪಂಚ್ನಿಂದ ಪವನ್ ಕುಮಾರ್ ಅವರ ಮುಖಕ್ಕೆ ಹೊಡೆದು ಮೂಗಿಗೆ ಗಂಭೀರ ಗಾಯಪಡಿಸಿದ್ದಾರೆ. ಯಶ್ರಾಜ್ ಹಾಗೂ ಶ್ರೇಯಸ್ ಅವರ ಮೇಲೂ ಹಲ್ಲೆ ನಡೆಸಿ, ಬಟ್ಟೆ ಹರಿದು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ವೇಳೆ ಆರೋಪಿತರೆಲ್ಲರೂ ನಿಟ್ಟೆಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂಬುದು ತಿಳಿದುಬಂದಿದೆ.


