ಉಡುಪಿ : ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಆಕರ್ಷಕ ಮಾದರಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆಗೆ ಮಟ್ಟು ಗುಳ್ಳ ಬೆಳೆಗಾರರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸಂಘದ ಅಧ್ಯಕ್ಷ ಸುನಿಲ್ ಡಿ. ಬಂಗೇರ ಈ ಕುರಿತು ಆಕ್ರೋಶ ಹೊರಹಾಕಿ, ಮಟ್ಟು ಗುಳ್ಳವು ಕೇವಲ ಒಂದು ತರಕಾರಿ ಬೆಳೆ ಮಾತ್ರವಲ್ಲದೆ ಮಟ್ಟು ಗ್ರಾಮದ ಹೆಮ್ಮೆ, ಕರಾವಳಿಯ ಸಂಸ್ಕೃತಿ, ರೈತರ ಪರಿಶ್ರಮ ಹಾಗೂ ಶ್ರೀ ಕ್ಷೇತ್ರ ಸೋದೆ ಶ್ರೀ ವಾದಿರಾಜ ಸ್ವಾಮೀಜಿಯವರ ಪವಿತ್ರ ಪ್ರಸಾದದ ನೆನಪನ್ನು ಹೊತ್ತಿರುವ ಅಮೂಲ್ಯ ಪರಂಪರೆಯಾಗಿದೆ. ದೇಶ–ವಿದೇಶಗಳಲ್ಲಿಯೂ ತನ್ನದೇ ಆದ ವಿಶೇಷ ಸ್ಥಾನ ಪಡೆದಿರುವ ಮಟ್ಟು ಗುಳ್ಳ ಇಂದು ಉಡುಪಿ ಜಿಲ್ಲೆಯ ಗೌರವದ ಸಂಕೇತವಾಗಿ ಗುರುತಿಸಿಕೊಂಡಿದೆ. ಮಟ್ಟು ಗುಳ್ಳದ ಮೇಲಿನ ಅಪಾರ ಅಭಿಮಾನದಿಂದ ದಾನಿಗಳಾದ ಸುಭಾಷ್ ಎಂ. ಸಾಲಿಯನ್ ನೆಲ್ಲಿಕಟ್ಟೆ ಅವರು ಐ ಲವ್ ಯು ವಿನ್ಯಾಸದೊಂದಿಗೆ ಮಟ್ಟು ಗುಳ್ಳದ ಆಕರ್ಷಕ ಮಾದರಿಯನ್ನು ನಿರ್ಮಿಸಿ ಗ್ರಾಮಕ್ಕೆ ಸಮರ್ಪಿಸಿದ್ದರು. ಈ ವಿನ್ಯಾಸವು ಪ್ರವಾಸಿಗರು ಹಾಗೂ ಯುವಜನರ ಗಮನ ಸೆಳೆಯುವುದರೊಂದಿಗೆ ಮಟ್ಟು ಗ್ರಾಮದ ಪ್ರಮುಖ ಗುರುತಾಗಿತ್ತು.

ಆದರೆ ಕೆಲ ದುಷ್ಕರ್ಮಿಗಳು ರಾತ್ರಿ ವೇಳೆ ಉದ್ದೇಶಪೂರ್ವಕವಾಗಿ ಈ ಮಾದರಿಯನ್ನು ಧ್ವಂಸಗೊಳಿಸಿ ಪುಡಿಗೈದಿರುವುದು ಅತ್ಯಂತ ಖಂಡನೀಯ ಕೃತ್ಯವಾಗಿದೆ. ಇದು ಕೇವಲ ಒಂದು ಮಾದರಿಯ ಮೇಲಿನ ದಾಳಿ ಅಲ್ಲ, ಮಟ್ಟು ಗ್ರಾಮದ ಗೌರವ, ರೈತರ ಭಾವನೆ ಹಾಗೂ ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಅಸ್ತಿತ್ವದ ಮೇಲಿನ ಅವಮಾನಕರ ಕೃತ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಹೇಯ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ತಕ್ಷಣವೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಟ್ಟು ಗುಳ್ಳ ಬೆಳೆಗಾರರ ಸಂಘ ಆಗ್ರಹಿಸಿದೆ.



