ಕೋಟ: ಎರಡು ದಿನಗಳ ಹಿಂದೆ ಅಷ್ಟೇ ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಕೋಟ ಮಣೂರು ಪಡುಕರೆ ನಿವಾಸಿ ಸಂತೋಷ್ ಮೃತಪಟ್ಟ ಶಿಕ್ಷಕ.

ಆಗಸ್ಟ್ 8ರಂದು ತೆಕ್ಕಟ್ಟೆಯಿಂದ ಕೋಟ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿದ್ದ ವೇಳೆ ಕೋಟ ಮಣೂರುನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಶಿಕ್ಷಕ ಸಂತೋಷ್ ಅವರಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಸಂತೋಷ್ ಅವರು ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದಿದ್ದರು, ಈ ಅಪಘಾತದಲ್ಲಿ ಸಂತೋಷ್ ಅವರ ತಲೆ ಮತ್ತು ಮುಖ ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಈ ಹಿನ್ನಲೆಯಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶಿಕ್ಷಕ ಸಂತೋಷ್ ಇಂದು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅಪಘಾತ ನಡೆಸಿದ ಲಾರಿ ಅಪಘಾತ ನಡೆಸಿ ಪರಾರಿಯಾಗಿದೆ, ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


