Friday, June 27, 2025

spot_img

ರಂಗ ನಿರ್ದೇಶಕ ಹಾಗೂ ಚಿತ್ರನಟ ಮಂಡ್ಯ ರಮೇಶ್‌ಗೆ ಪಂಚಮಿ ಪುರಸ್ಕಾರ ಪ್ರದಾನ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಸಂಸ್ಕೃತಿ ಉತ್ಸವದ ಎರಡನೇ ದಿನವಾದ ಶುಕ್ರವಾರ ಉಡುಪಿ ಪಂಚಮಿ ಟ್ರಸ್ಟ್ ಪ್ರಾಯೋಜಿತ ಪಂಚಮಿ ಪುರಸ್ಕಾರವನ್ನು ರಂಗ ನಿರ್ದೇಶಕ ಹಾಗೂ ಚಿತ್ರನಟ ಮಂಡ್ಯ ರಮೇಶ್‌ಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಮಂಡ್ಯ ರಮೇಶ್ ಮಾತನಾಡಿ, ರಂಗ ಕಲಾವಿದ ಆಗುವುದು ಸುಲಭದ ಕೆಲಸ ಅಲ್ಲ. ಅದು ಸಾಹಸ ಕಾರ್ಯವಾಗಿದೆ. ಗಾಂಧಿಯನ್ನು ಬದಲಾಯಿಸಿರುವುದು ಇದೇ ರಂಗಭೂಮಿ. ಜಗತ್ತಿನ ಎಲ್ಲ ಕಲೆಗಳ ಮೂಲ ಅಸ್ತಿತ್ವ ಜಾನಪದದಲ್ಲಿ ಇದೆ. ರಾಮಾಯಣ ಮಹಾ ಭಾರತಗಳು ಬದುಕಿನ ರೂಪಕಗಳು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಮಾತನಾಡಿ, ನಾಟಕ, ಕಲೆ, ಸಂಗೀತವು ಮನುಷ್ಯತ್ವದ ಸಂಬಂಧ ಬೆಳೆಸಲು ಸಹಾಯ ಮಾಡುತ್ತದೆ. ಮನುಷ್ಯತ್ವದ ನೆಲೆಯಲ್ಲಿ ಸಂಬಂಧ ಗಟ್ಟಿಗೊಳಿಸುವುದು ತುಂಬಾ ಇಂದಿನ ಅಗತ್ಯವಾಗಿದೆ. ಮಕ್ಕಳು ಹಾಗೂ ಯುವಜನತೆಯಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕಾದರೆ ಅವರು ಕಲೆಯಲ್ಲಿ ತೊಡಗಿಸಿಕೊಳ್ಳಬೇಕು. ಭಿನ್ನ ದಾರಿಯಲ್ಲಿ ಸಾಗುತ್ತಿರುವ ಯುವಜನತೆಯನ್ನು ಸರಿಯಾದ ದಾರಿಯನ್ನು ಮನ್ನಡೆಸಿಕೊಂಡು ಹೋಗಬೇಕಾದರೆ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಯಕ್ಷರಂಗಾಯಣ ಕಾರ್ಕಳ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಎಂ.ಹರೀಶ್ಚಂದ್ರ ಮಾತನಾಡಿದರು. ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನ ಮಾತುಗಳನ್ನಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಉಪಾಧ್ಯಕ್ಷ ವಿಘ್ನೇಶ್ವರ ಅಡಿಗ, ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ, ಸುಗುಣ ಸುವರ್ಣ ಉಪಸ್ಥಿತರಿದ್ದರು. ಪಂಚಮಿ ಪುರಸ್ಕಾರದ ಸಂಚಾಲಕ ಜನಾರ್ದನ ಕೊಡವೂರು ಸ್ವಾಗತಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಡ್ಯ ರಮೇಶ್ ನಿರ್ದೇಶನ ‘ಚೋರ ಚರಣದಾಸ’ ನಾಟಕ ಪ್ರದರ್ಶನ ಗೊಂಡಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles