ಉಡುಪಿ : ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಟೋಲ್ ವಿನಾಯಿತಿ ಪತ್ರವಿದ್ದರೂ ನಿವೃತ್ತ ಪ್ಯಾರಾ ಕಮಾಂಡೋ ಶ್ಯಾಮರಾಜ್ ಅವರಿಗೆ ಸಿಬ್ಬಂದಿ ಅವಮಾನಿಸಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಿವೃತ್ತ ಸೈನಿಕರ ಸಂಘ ದೂರು ದಾಖಲಿಸಿದೆ.

ಜನವರಿ 25ರ ರಾತ್ರಿ ಸುಮಾರು 9.30ರ ವೇಳೆಗೆ ಈ ಘಟನೆ ನಡೆದಿದ್ದು, ಅದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಸರಗೋಡು ಮೂಲದ ಶ್ಯಾಮರಾಜ್ ಅವರು ಅಪರೇಶನ್ ಪರಾಕ್ರಮ ಸಂದರ್ಭದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಲ್ಯಾಂಡ್‌ಮೈನ್ ಸ್ಫೋಟದಲ್ಲಿ ಗಂಭೀರ ಗಾಯಗೊಂಡು ಶಾಶ್ವತ ವಿಕಲಾಂಗರಾಗಿದ್ದಾರೆ.

ಪತ್ನಿ ಮಿಲಿಟರಿ ನರ್ಸಿಂಗ್ ಸರ್ವಿಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ವರ್ಗಾವಣೆಯ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಪ್ರಯಾಣಿಸುವಾಗ ಸಾಸ್ತಾನ ಟೋಲ್ ಮೂಲಕ ಹೋಗುವ ವೇಳೆ ವಿನಾಯಿತಿ ದಾಖಲೆ ಇದ್ದರೂ ಸಿಬ್ಬಂದಿ ನಿಂದಿಸಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೈನಿಕರಿಗೆ ಅವಮಾನ ಎಂದರೆ ದೇಶಕ್ಕೆ ಅವಮಾನ ಎಂದು ಮಾಜಿ ಸೈನಿಕರ ಸಂಘ ಕಿಡಿಕಾರಿದ್ದು, ಟೋಲ್ ಪ್ಲಾಜಾದ ಆರು ಮಂದಿ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದೆ.

ದೂರು ಸ್ವೀಕರಿಸಿದ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಪ್ರಾಥಮಿಕವಾಗಿ ದೂರು ದಾಖಲಿಸಿಕೊಂಡು ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಈ ವೇಳೆ ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್, ಎಸ್ಐ ಮಾಂತೇಶ್ ಜಾಬಗೌಡ, ಮಾಜಿ ಸೈನಿಕರು ಹಾಗೂ ಸ್ಥಳೀಯ ಹೋರಾಟಗಾರರು ಉಪಸ್ಥಿತರಿದ್ದರು.



